ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ಪಣ ತೊಟ್ಟಿರುವ ಬೆಂಗಳೂರು ಪೊಲೀಸರು, ಡ್ರಗ್ಸ್ ಜಾಲದ ವಿರುದ್ಧ ಐತಿಹಾಸಿಕ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 104 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸುವ ಮೂಲಕ ಡ್ರಗ್ಸ್ ಮಾಫಿಯಾಕ್ಕೆ ಭಾರಿ ಪೆಟ್ಟು ನೀಡಿದ್ದಾರೆ. ಈ ಕಾರ್ಯಾಚರಣೆಯು ಕೇವಲ ಪೆಡ್ಲರ್ಗಳಿಗೆ ಸೀಮಿತವಾಗದೆ, ದಂಧೆಗೆ ಸಹಕರಿಸಿದ ಇಲಾಖೆಯೊಳಗಿನ ಪೊಲೀಸರಿಗೂ ಬಿಸಿ ಮುಟ್ಟಿಸಿದ್ದಾರೆ.
ಡ್ರಗ್ಸ್ ದಂಧೆಕೋರರ ಜೊತೆ ಕೈಜೋಡಿಸಿದ ಆರೋಪದ ಮೇಲೆ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ತಡೆಯಲು ವಿಫಲರಾದ 26 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಈ ಮೂಲಕ ಕರ್ತವ್ಯ ಲೋಪ ಎಸಗುವವರ ವಿರುದ್ಧ ಇಲಾಖೆ ಕಠಿಣ ಸಂದೇಶ ರವಾನಿಸಿದೆ. ಮಾದಕ ವಸ್ತು ಮುಕ್ತ ಕರ್ನಾಟಕ ಗುರಿ ತಲುಪಲು ಎನ್ಸಿಬಿ ಮಾದರಿಯಲ್ಲೇ ರಾಜ್ಯದಲ್ಲಿ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ANTF) ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
