ಮಂಗಳೂರು: ಹೆಂಡತಿಯ ಮಾಲೀಕತ್ವದಲ್ಲಿದ್ದ ಮೂರು ಘನ ವಾಹನಗಳನ್ನು ಪೋರ್ಜರಿ ಸಹಿ ಹಾಕಿ ಗಂಡ ತನ್ನ ಅಪ್ರಾಪ್ತ ಮಗಳ ಹೆಸರಿಗೆ ವರ್ಗಾಯಿಸಿ ಮೋಸ ಮಾಡಿ ವಂಚಿಸಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಎಮ್.ಎಸ್.ಇ.ಝಡ್ ಕಾಲೊನಿ ರಾಮ ನಗರದ ನಿವಾಸಿ ಭವ್ಯ ಶೆಟ್ಟಿ ದೂರು ನೀಡಿರುವ ಮಹಿಳೆಯಾಗಿದ್ದು, ತನ್ನ ಗಂಡ ದಾಮೋದರ ಶೆಟ್ಟಿ ವಂಚನೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಈಕೆಯ ಗಂಡ ದಾಮೋದರ ಶೆಟ್ಟಿ ಪ್ರತಿಷ್ಠಿತ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಂಪೆನಿಯಲ್ಲಿ ಉದ್ಯೋಗಿಯಾಗಿರುತ್ತಾರೆ.
ದೂರಿನ ಉಲ್ಲೇಖ:
ದಾಮೋದರ ಶೆಟ್ಟಿ ಕೆಎ -19- ಎಬಿ-7192, ಕೆಎ -20-ಬಿ-9557, ಕೆಎ-19-8723 ಎಂಬ ಮೂರು ಟ್ಯಾಂಕರ್ ಗಾಡಿಯನ್ನು ಖರೀದಿಸಿದ್ದು, ಈ ಗಾಡಿ ಖರೀದಿಗೆ ನನ್ನಲ್ಲಿದ್ದ 25 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ನೀಡಿರುವುದಾಗಿ ಹೇಳಿದ್ದಾರೆ. ಈ ಮೂರು ವಾಹನಗಳು ಭವ್ಯ ಶೆಟ್ಟಿ ಅವರ ಹೆಸರಿನಲ್ಲೇ ಇತ್ತು. ಆದರೆ ದಾಮೋದರ ಶೆಟ್ಟಿ ವಾಟರ್ ಟ್ಯಾಂಕಿನಲ್ಲಿ ಬಂದಿರುವ ಎಲ್ಲಾ ಲಾಭಾಂಶವನ್ನು ಭವ್ಯ ಶೆಟ್ಟಿ ಹೆಸರಿನಲ್ಲಿದ್ದ ಮೊಬೈಲ್ ಸಿಮ್ ಅನ್ನು ಕದ್ದು ತನ್ನ ಹೆಸರಿಗೆ ವರ್ಗಾವಣೆ ಮಾಡಿ ಲಾಭಾಂಶವನ್ನು ಕೊಡದೆ ವಂಚಿಸಿದ್ದು, ಹಣ ಕೇಳಲು ಹೋದರೆ ಬೆದರಿಕೆ ಹಾಕಿರುವುದಾಗಿ ದೂರಿಕೊಂಡಿದ್ದಾರೆ.
ಇದರಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ನನ್ನ ಮಾಲೀಕತ್ವದ ವಾಹನಗಳು ವರ್ಗಾವಣೆ ಆಗಿರುವ ಬಗ್ಗೆ ಆರ್ ಟಿ ಓ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದರೂ ಯಾವುದೇ ಉತ್ತರ ನೀಡಿರುವುದಿಲ್ಲ. ಈ ಬಗ್ಗೆ ಮಾಹಿತಿ ನೀಡದಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಹಾಕಿ ದಾಖಲೆ ಪಡೆದಿದ್ದು, ಆಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ನಕಲಿ ಪೋರ್ಜರಿ ಸಹಿ ಹಾಕಿ ದಾಮೋದರ ಶೆಟ್ಟಿ ತನ್ನ ಹೆಸರಿನಲ್ಲಿದ್ದ ಮೂರು ಘನ ವಾಹನಗಳನ್ನು ತನ್ನ ಅಪ್ರಾಪ್ತ ಮಗಳಾದ ಶಿಖಾ ಶೆಟ್ಟಿ ಹೆಸರಿಗೆ ವರ್ಗಾವಣೆ ಮಾಡಿದ್ದು, ಇದರಿಂದಾಗಿ ನನಗೆ 25 ಲಕ್ಷ ರೂಪಾಯಿ ನಷ್ಟ ಆಗಿರುವುದಾಗಿ ದೂರಿಕೊಂಡಿದ್ದಾರೆ.
ನನ್ನ ಗಮನಕ್ಕೆ ತರದೆ, ನನ್ನ ಹೆಸರಿನಲ್ಲಿದ್ದ ವಾಹನಗಳನ್ನು ಪೋರ್ಜರಿ ಸಹಿ ಹಾಕಿ ವರ್ಗಾವಣೆ ಮಾಡಿರುವ ನನ್ನ ಗಂಡ ದಾಮೋದರ ಶೆಟ್ಟಿ ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭವ್ಯ ಶೆಟ್ಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 19/02/2026 ರಂದು ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂಖ್ಯೆ: 0047/2026 ರಂತೆ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ
