ಪಡುಬಿದ್ರಿ: ಸಾಲದ ಹಣವನ್ನು ಕೇಳಿದ ಕಾರಣಕ್ಕೆ ಸ್ನೇಹಿತನ ಮೇಲೆಯೇ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಕಾರ್ಕಳ ತಾಲೂಕಿನ ಬಜಗೋಳಿ ಅಂಚೆ ನಿವಾಸಿ ಸುಮಿತ್ ಎಸ್. ಸುವರ್ಣ (29) ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರ ದೂರಿನ ಪ್ರಕಾರ, ಆರೋಪಿ ಧೀರಜ್ ಅವರೊಂದಿಗೆ ಸ್ನೇಹಿತರಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ 2 ಲಕ್ಷ ರೂಪಾಯಿ ಸಾಲವಾಗಿ ನೀಡಿದ್ದರು. ಆರು ತಿಂಗಳೊಳಗೆ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರೂ ಆರೋಪಿ ಹಣವನ್ನು ಮರಳಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ 13ರಂದು ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಹೆಜಮಾಡಿ ಸ್ಟೇಡಿಯಂ ಬಳಿ ಇಬ್ಬರೂ ಭೇಟಿಯಾಗಿದ್ದ ವೇಳೆ ಸುಮಿತ್ ಅವರು ಸಾಲದ ಹಣವನ್ನು ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಧೀರಜ್ “ಹಣ ಕೊಡೋದಿಲ್ಲ” ಎಂದು ಹೇಳಿ ಸುಮಿತ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಂತರ ಮನೆಗೆ ಬಂದು ಹಣ ಕೊಡುತ್ತೇನೆ ಎಂದು ಹೇಳಿ ತನ್ನ ಬೈಕ್‌ನಲ್ಲಿ ಸುಮಿತ್ ಅವರನ್ನು ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ. ಸ್ಟೇಡಿಯಂನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನದ ಬಳಿ ರಾತ್ರಿ ಸುಮಾರು 11.50ರ ಸುಮಾರಿಗೆ ಬೈಕ್ ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
