ಬೆಂಗಳೂರು : “ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಚುನಾಯಿತ ಶಾಸಕರಿಗಿಂತ ಪರಾಜಿತ ಅಭ್ಯರ್ಥಿಗಳ ಪತ್ರಕ್ಕೇ ಹೆಚ್ಚಿನ ಬೆಲೆ ಸಿಗುತ್ತಿದೆ,” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ರಾಜೇಶ್ ನಾಯ್ಕ್ , “ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇಂದಿಗೂ ಸಚಿವ ಎಂದೇ ಭಾವಿಸಿದಂತಿದೆ. ಕಾಮಗಾರಿಗಳ ಏಜೆನ್ಸಿಗಳನ್ನು ಗುರುತಿಸಲು ಮಾಜಿ ಶಾಸಕರಿಗೆ ಅಧಿಕಾರಿಗಳು ಪತ್ರ ಬರೆಯುತ್ತಿದ್ದಾರೆ. ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಾಜಿತ ಅಭ್ಯರ್ಥಿಗಳ ಶಿಫಾರಸಿನ ಮೇಲೆ ಹಣ ಬಿಡುಗಡೆ ಮಾಡುತ್ತಿರುವುದು ಶಾಸಕರ ಹಕ್ಕುಚ್ಯುತಿಯಲ್ಲವೇ?” ಎಂದು ಪ್ರಶ್ನಿಸಿದರು.
ರಾಜೇಶ್ ನಾಯ್ಕ್ ಅವರ ಈ ಗಂಭೀರ ಆರೋಪಕ್ಕೆ ಬಿಜೆಪಿ ಶಾಸಕರು ದನಿಗೂಡಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ದೂರಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಚುನಾಯಿತ ಪ್ರತಿನಿಧಿಗಳ ಗೌರವ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಶಾಸಕರು ತರಾಟೆಗೆ ತೆಗೆದುಕೊಂಡರು.
