ಏನಾಗುತ್ತಿದೆ ಮಂಗಳೂರಿನಲ್ಲಿ..? ಅಬ್ಬಬ್ಬಾ.. ವರ್ಷದ ಹಿಂದೆ ಮಂಗಳೂರಿನಲ್ಲಿ ಇಂತಹ ಮಾತುಗಳು ಬೀದಿ ಬೀದಿಗಳಲ್ಲಿ ಕೇಳಿ ಬರುತ್ತಿತ್ತು. ದಿನ ಬೆಳಗಾದರೆ ಸಾಕು, ಗ್ಯಾಂಗ್ ವಾರ್ ಗಳ ಅಬ್ಬರ ಮಂಗಳೂರಿನಲ್ಲಿ ಕೇಳಿ ಬರುತ್ತಿತ್ತು. ಪೊಲೀಸರ ಎಚ್ಚರಿಕೆಗಿಂತಲೂ ಹೆಚ್ಚಾಗಿ ದುಬೈ, ಮುಂಬೈ ನಲ್ಲಿ ಅಡಗಿರುವ ‘ಬಾಯಿ ಲೋಗ್’ ಗಳ ಆದೇಶವೇ ಇಲ್ಲಿ ಜಾರಿಗೊಳ್ಳುತ್ತಿತ್ತು. ಅಪರಾಧ ಸುದ್ದಿಗಳು ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿತ್ತು. ದ್ವೇಷ ಭಾಷಣಕಾರರ ಅಟ್ಟಹಾಸ ಮಂಗಳೂರಿನಲ್ಲಿ ಮುಗಿಲು ಮುಟ್ಟುತ್ತಿತ್ತು. ಮತೀಯ ಗಲಭೆಗಳಿಗೆ ಕರಾವಳಿ ಕುಖ್ಯಾತಿ ಪಡೆದಿತ್ತು. ಚೂರಿಗಳದ್ದೇ ಅಬ್ಬರ, ಅಮಾಯಕರ ನೆತ್ತರ ಓಕುಳಿ ಹರಿಯುತ್ತಿತ್ತು. ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಮಂಗಳೂರಿನಲ್ಲಿದೆಯಾ.? ಅಂತ ಸಾರ್ವಜನಿಕರು ಪ್ರಶ್ನಿಸುವಂತಾಗಿತ್ತು.
ಆದರೆ ಮಂಗಳೂರಿಗೆ ಖಡಕ್ ಎಸ್ಪಿ ಅರುಣ್, ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಂಗಳೂರು ಕಾನೂನು ಸುವ್ಯವಸ್ಥೆ ಪೊಲೀಸರ ಹತೋಟಿಗೆ ಬಂದಿತ್ತು. ದ್ವೇಷ ಭಾಷಣಕೋರರು ಗಪ್ ಚುಪ್. ಮತೀಯ ಗಲಭೆಕೋರರು ಬಿಲ ಸೇರಿಕೊಂಡರು. ಗ್ಯಾಂಗ್ ವಾರ್ ಅಟ್ಟಹಾಸಕ್ಕೆ ಕಡಿವಾಣ ಬಿತ್ತು. ಡ್ರಗ್ಸ್ ದಂಧೆಕೋರರ ಕೈಗೆ ಕೋಳ ಬಿತ್ತು. ಇನ್ನೇನು ಮಂಗಳೂರು ನೆಮ್ಮದಿಯಿಂದ ನಿದ್ದೆ ಮಾಡಬಹುದು ಅನ್ನುತ್ತಿರುವಾಗಲೇ ಮತ್ತೆ ಮಂಗಳೂರಿನಲ್ಲಿ ಗ್ಯಾಂಗ್ ವಾರ್ ಅಟ್ಟಹಾಸ ಮೇಳೈಸಿದೆ. ತೊಕ್ಕೊಟ್ಟು ಪ್ಲೈ ಓವರ್ ಮೇಲೆಯೇ ನಸುಕಿನ ಜಾವವೇ ರೌಡಿ ಶೀಟರ್ ಟ್ಯಾಬ್ಲೆಟ್ ಆರೀಫ್ ಹೆಣ ಉರುಳಿಬಿದ್ದಿದೆ. ಮಂಗಳೂರಿಗೆ ದಕ್ಷ ಆಫೀಸರ್ಸ್ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಗ್ಯಾಂಗ್ ವಾರ್ ಪ್ರಕರಣ ಇದು. ನಿಜವಾಗಿ ಪೊಲೀಸ್ ಇಲಾಖೆಗೆ ಇದೊಂದು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಿಡಬೇಕಾದ ಸಂದರ್ಭ ಇದು. ಈ ಹಿಂದೆ ದಕ್ಷ ಅಧಿಕಾರಿಗಳು ಚಾರ್ಜ್ ನಲ್ಲಿ ಇರುವಾಗಲೇ ನಟೋರಿಯಸ್ ಪಾತಕಿ ಟೊಪ್ಪಿ ನೌಫಲ್ ನ ಹೆಣ ಬಿದ್ದಿತ್ತು. ಆದರೆ ಜಿಲ್ಲೆಯ ಪೊಲೀಸ್ ಲಿಮಿಟ್ ದಾಟಿ ಉಪ್ಪಳದಲ್ಲಿ ಈ ಘಟನೆ ನಡೆದಿರುವುದರಿಂದ ಇಲ್ಲಿನ ಪೊಲೀಸರಿಗೆ ಅಷ್ಟೊಂದು ದೊಡ್ಡ ತಲೆಬಿಸಿ ಇರಲಿಲ್ಲ.
ಮಂಗಳೂರಿನಲ್ಲಿ ಈ ಹಿಂದೆ ಗ್ಯಾಂಗ್ ವಾರ್ ಗೆ ಕುಖ್ಯಾತಿ ಪಡೆದಿತ್ತು. ಫರಂಗಿಪೇಟೆ ಡಬ್ಬಲ್ ಮರ್ಡರ್, ಮಾರಿಪಳ್ಳ ಹತ್ಯಾ ಸರಣಿ, ಭೂಗತ ಪಾತಕಿಗಳ ಒಂದರ ಹಿಂದೆ ಒಂದರಂತೆ ಹತ್ಯಾ ಪ್ರಕರಣ ನಡೆದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆಯೇ ಧಾರಾಳ ಅನುಮಾನ ಉಂಟಾಗಿತ್ತು. ಮತೀಯ ಗಲಭೆಗಂತೂ ಮಂಗಳೂರು ನಲುಗಿ ಹೋಗಿತ್ತು. ಕೋಮು ಗಲಭೆಗಳಿಂದ ಮಂಗಳೂರು ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪ್ಪು ಚುಕ್ಕೆ ತಂದಿತ್ತು. ವರ್ಷದ ಹಿಂದೆಯಷ್ಟೇ ನಡೆದ ಸುಹಾಸ್ ಶೆಟ್ಟಿ ಹತ್ಯೆ, ಕುಡುಪು ಅಶ್ರಫ್ ಗುಂಪು ಹತ್ಯೆ, ಕೊಳತ್ತಮಜಲ್ ಅಮಾಯಕ ಅಬ್ದುಲ್ ರಹಿಮಾನ್ ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಕ್ಷರಶಃ ನಲುಗಿ ಹೋಗುವಂತೆ ಮಾಡಿತ್ತು. ತಿಂಗಳ ಅಂತರದಲ್ಲಿ ನಡೆದ ಈ ಮೂರು ಹತ್ಯೆಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಪೊಲೀಸ್ ಇಲಾಖೆಯ ಬಗೆಗೆ ಜನಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದರು. ಮನೆಯಿಂದ ಹೊರಗೆ ಹೋದರೆ ಸೇಫಾಗಿ ಮನೆಗೆ ಹಿಂತಿರುಗಿ ಬರಬಹುದಾ ಅನ್ನುವ ಅನುಮಾನ ನಾಗರಿಕರಲ್ಲಿ ಕಾಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ರಕ್ಕಸರ ಅಟ್ಟಹಾಸಕ್ಕೆ ಪುಲಿಸ್ಟಾಪ್ ಇಡಲು ನೇರವಾಗಿ ಸರಕಾರವೇ ಇಬ್ಬರು ಖಡಕ್ ಅಧಿಕಾರಿಗಳನ್ನು ಮಂಗಳೂರಿಗೆ ಕಳುಹಿಸಿತ್ತು. ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದರು. ಅಪರಾಧಿಗಳ ಜೊತೆಗೆ ತಿರುಗಾಡಿದರೇ ಅಂತಹವರ ಮೇಲೆಯೇ ಕೇಸು ಹಾಕುವ ಸಂದೇಶ ರವಾನಿಸಿದರು. ಕೆ-ಕೊಕಾ ಕಾಯಿದೆ ಬಗ್ಗೆ ಮಾಹಿತಿ ನೀಡಿ ಅಪರಾಧಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದರು. ಪೊಲೀಸರ ಪ್ಲ್ಯಾನ್ ವರ್ಕೌಟ್ ಆಗಿತ್ತು. ಅಪರಾಧ ಕೃತ್ಯಗಳಲ್ಲಿ ತೊಡಗಲು ಹಿಂದೇಟು ಹಾಕಿದರು. ಮತೀಯ ಗಲಭೆಕೋರರು ಎಸ್ಕೇಪ್ ಆದರು. ಇಡೀ ಜಿಲ್ಲೆಯನ್ನು ಪೊಲೀಸರು ಹತೋಟಿಗೆ ತಂದರು. ಈವರೆಗೂ ಪೊಲೀಸರು ಥಿಯರಿ ಮಾತ್ರ ಹೇಳಿ ಅಪರಾಧ ಪ್ರಕರಣವನ್ನು ಹತೋಟಿಗೆ ತಂದಿದ್ದರು. ಆದರೆ ಇದೀಗ ಮಂಗಳೂರಿನಲ್ಲಿ ಗ್ಯಾಂಗ್ ವಾರ್ ಗೆ ರೌಡಿ ಶೀಟರ್ ವೊಬ್ಬನ ಹೆಣ ಬಿದ್ದಿದೆ. ಈ ಕೃತ್ಯದ ಸಂಪೂರ್ಣ ವಿವರ, ಆರೋಪಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಪೊಲೀಸರಿಗಿದೆ. ಇಲ್ಲಿನ ಗ್ಯಾಂಗ್ ವಾರ್ ಗಳು ಪೊಲೀಸರಿಗೆ ಸವಾಲು ಹಾಕಿದ್ದಾರೆ. ಪೊಲೀಸರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವ ಜರೂರತ್ತಿದೆ. ಒಂದು ವೇಳೆ ಈ ಹತ್ಯೆ ಪ್ರಕರಣದ ಸಂಪೂರ್ಣ ಮಾಹಿತಿ ಬೇಧಿಸಲು ಪೊಲೀಸರು ವಿಫಲರಾದರೆ ಇಲ್ಲಿ ಮತ್ತೆ ಗ್ಯಾಂಗ್ ವಾರ್ ಧುತ್ತನೆ ಎದ್ದೇಳುವುದಂತೂ ಸತ್ಯ. ಅದರ ಜೊತೆಗೆ ಮತೀಯ ದುಷ್ಕರ್ಮಿಗಳು ಮತ್ತೆ ಬಾಲ ಬಿಚ್ಚುವುದು ಶತಸಿದ್ಧ. ಒಂದರ್ಥದಲ್ಲಿ ಮಂಗಳೂರಿನಲ್ಲಿ ನಡೆದ ಗ್ಯಾಂಗ್ ವಾರ್ ಪೊಲೀಸರ ದಕ್ಷತೆ ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿರುವುದಂತೂ ಸುಳ್ಳಲ್ಲ.
