ಟೆಹ್ರಾನ್ : ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕುವೈತ್‌ನ ವಿದ್ಯುತ್ ಸ್ಥಾವರ ಮತ್ತು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ದಾ*ಳಿ ನಡೆಸಿದೆ. ಪರಿಣಾಮ ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ.
ಈ ದಾಳಿಯಿಂದಾಗಿ ಕುವೈತ್‌ನ ಪವರ್ ಸ್ಟೇಷನ್ ಮತ್ತು ಜಲಸ್ಥಾವರಗಳಿಗೆ ಭಾರೀ ಹಾನಿಯಾಗಿದೆ. ಈ ಬಗ್ಗೆ ಕುವೈತ್‌ನ ವಿದ್ಯುತ್ ಮತ್ತು ನೀರು ಸರಬರಾಜು ಸಚಿವಾಲಯ ಇಂದು(ಮಾ.30) ಘಟನೆಯನ್ನು ಅಧಿಕೃತವಾಗಿ ಖಚಿತ ಪಡಿಸಿದೆ. ಭಾನುವಾರ ಸಂಜೆ ಈ ದಾಳಿ ನಡೆದಿದ್ದು, ಇರಾನ್ ದೇಶವು ಕುವೈತ್ ಮೇಲೆ ನಡೆಸುತ್ತಿರುವ ಆಕ್ರಮಣದ ಭಾಗವಾಗಿ ದಾಳಿ ನಡೆದಿದೆ ಎಂದು ಕುವೈತ್‌ನ ವಿದ್ಯುತ್, ನೀರು ಮತ್ತು ಇಂಧನ ಸಚಿವಾಲಯ ಹೇಳಿಕೆ ನೀಡಿದೆ. ಪವರ್ ಪ್ಲಾಂಟ್‌ನ ಸರ್ವೀಸ್ ಬಿಲ್ಡಿಂಗ್ ಮತ್ತು ವಾಟರ್ ಪ್ಲಾಂಟ್ ಮೇಲೆ ಗುರಿಯಾಗಿಸಿ ಈ ದಾಳಿ ನಡೆದಿದೆ. ಪರಿಣಾಮ ಅಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಘಟನೆ ನಡೆದ ತಕ್ಷಣ ಭದ್ರತಾ ಅಧಿಕಾರಿಗಳು, ತುರ್ತು ತಂಡಗಳು ಸ್ಥಳಕ್ಕೆ ದೌಡಾಯಿಸಿದರು. ಉದ್ವಿಗ್ನತೆಯ ನಡುವೆಯೂ, ಅಗತ್ಯ ಸೇವೆಗಳು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರಲು ತಾಂತ್ರಿಕ ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
