ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ಸಾರಿಗೆ ಸಂಸ್ಥೆಯ ಬಸ್ ಅನ್ನು ರಸ್ತೆ ಮಧ್ಯೆಯೇ ಅಡ್ಡಗಟ್ಟಿ, ಚಾಲಕನೊಂದಿಗೆ ಕಿರಿಕ್ ಮಾಡಿ ವಿಕೃತಿ ಮೆರೆದಿದ್ದ ಮೂವರು ಆಟೋ ಚಾಲಕರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಡೂರಿನಿಂದ ಪ್ರಯಾಣಿಕರನ್ನು ಹೊತ್ತು ಚಿಕ್ಕಮಗಳೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್ಸನ್ನು ಈ ಮೂವರು ಯುವಕರು ತಡೆದಿದ್ದಾರೆ. ತಮ್ಮ ಆಟೋವನ್ನು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಬಸ್ಸಿನ ಮುಂಭಾಗದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಪುಂಡಾಟ ಮೆರೆದಿದ್ದಾರೆ. ಬಸ್ ಚಾಲಕ ಹಾರ್ನ್ ಮಾಡಿ ದಾರಿ ಬಿಡುವಂತೆ ವಿನಂತಿಸಿದರೂ, ಅದಕ್ಕೆ ಕಿಂಚಿತ್ತೂ ಕ್ಯಾರೆ ಎನ್ನದ ಯುವಕರು ಬಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಆಟೋ ಚಾಲಕರು ಬಸ್ ಅಡ್ಡಗಟ್ಟಿ ಅಟ್ಟಹಾಸ ಮೆರೆಯುತ್ತಿದ್ದ ದೃಶ್ಯಗಳನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಹಾದಿಹೋಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಮಗಳೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಘಟನೆಗೆ ಬಳಸಿದ್ದ ಆಟೋವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೃತ್ಯವೆಸಗಿದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
