ಮಂಗಳೂರು: ತನ್ನ ಕಕ್ಷಿದಾರೆಯ ಪತಿಯ ವಿರುದ್ಧ ಕಳೆದ 9 ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಪ್ರಕರಣದಲ್ಲಿ ಕಾನೂನು ಸಹಾಯ ಪಡೆಯಲು ನ್ಯಾಯವಾದಿ ಜೀಶನ್ ಅಲಿ ಅವರನ್ನು ಮಹಿಳೆ ಸಂಪರ್ಕಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಇದೀಗ ನ್ಯಾಯವಾದಿಯ ಮೇಲೆಯೇ ಹಲ್ಲೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ.
ದಿನಾಂಕ 11-05-2026ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ, ನ್ಯಾಯವಾದಿ ಜೀಶನ್ ಅಲಿ ಅವರು ತಮ್ಮ ವೃತ್ತಿ ಕಾರ್ಯ ಮುಗಿಸಿ ಅತ್ತಾವರ ಪ್ರದೇಶದ ಮೂಲಕ ಮನೆಗೆ ತೆರಳುತ್ತಿದ್ದ ವೇಳೆ, ಆರೋಪಿ ರಿಯಾಜ್ ಎಂಬಾತ ದಾರಿ ಮಧ್ಯೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದಷ್ಟೇ ಅಲ್ಲದೆ, ತನ್ನ ದ್ವಿಚಕ್ರ ವಾಹನದಲ್ಲಿ ತಂದಿದ್ದ ಹರಿತವಾದ ಆಯುಧಗಳನ್ನು ಬಳಸಿ ನ್ಯಾಯವಾದಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಮಧ್ಯಪ್ರವೇಶಿಸಿ ತಡೆದ ಪರಿಣಾಮ, ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದಂತಾಗಿದೆ.
ಆರೋಪಿ ರಿಯಾಜ್ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿದ್ದು, ಆತ ರೌಡಿ ಶೀಟರ್ ಆಗಿರುವ ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ಹಲ್ಲೆಗೆ ಯತ್ನಿಸಿದ ಪ್ರಕರಣವೂ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯಿದೆಯ ವಿವಿಧ ಕಲಂಗಳು ಹಾಗೂ ಕರ್ನಾಟಕ ವಕೀಲರ ರಕ್ಷಣಾ ಕಾಯಿದೆ 2023ರ ಅಡಿಯಲ್ಲಿ ಅಕ್ರಮ ಸಂಖ್ಯೆ 87/2026ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
