ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ವಿಜಯಪುರದ ‘ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ಸರಣಿ ಆರೋಪ ಕೇಳಿಬಂದಿವೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಪಿಎಚ್ಡಿ ಪದವಿ ಪ್ರದಾನ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಮತ್ತು ಲಂಚಕ್ಕೆ ಬೇಡಿಕೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇನ್ನು ಪಿಹೆಚ್ಡಿ ಪದವಿ ಪ್ರದಾನ ವಿಚಾರದಲ್ಲೂ ಭ್ರಷ್ಟಾಚಾರ, ಕಿರುಕುಳ ಆರೋಪ ಕೇಳಿಬಂದಿವೆ. ಸರ್ಕಾರದ ಹಾಗೂ ಮೀಸಲಾತಿ ನಿಯಮಾವಳಿಗಳಿಗೆ ಅನುಗುಣವಾಗಿ ಪಿಹೆಚ್.ಡಿ ಪ್ರವೇಶಾತಿಯನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳ ಮೂಲಕ ನಡೆಸಬೇಕು. ಈ ವರ್ಷ 100ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ದಾಖಲಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಎಕ್ಸಿಕ್ಯೂಟಿವ್ ಕಮಿಟಿಯನ್ನು ನಿಷ್ಕ್ರಿಯಗೊಳಿಸಿ, ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಹಣ, ಚಿನ್ನಕ್ಕೆ ಬೇಡಿಕೆ
ಮಹಾಪ್ರಬಂಧ ಸಲ್ಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಗೋಲ್ಮಾಲ್ ನಡೆಯುತ್ತಿವೆ ಎಂದು ಸಂಶೋಧನಾ ವಿದ್ಯಾರ್ಥಿನಿ ಹೇಳಿದ್ದಾರೆ. ಮೌಖಿಕ ಪರೀಕ್ಷೆ ಮತ್ತು ಮಹಾಪ್ರಬಂಧ ಮೌಲ್ಯಮಾಪನವನ್ನು ಬಾಹ್ಯ ತಜ್ಞರ ಸಮಿತಿಯಿಂದ ಸಮರ್ಪಕವಾಗಿ ನಡೆಸದೇ, ಕಾಟಾಚಾರಕ್ಕೆ ಎಂಬಂತೆ ಪ್ರಕ್ರಿಯೆ ನಡೆಯುತ್ತಿದೆಯಂತೆ. ಮಹಾಪ್ರಬಂಧ ಸಲ್ಲಿಕೆಗೆ ವಿಶ್ವವಿದ್ಯಾಲಯ ಅನುಮತಿ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹಣ ಹಾಗೂ ಚಿನ್ನಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ವಿವಿ ಕುಲಪತಿ ಪ್ರೊ ವಿಜಯಾ ಕೋರಿಶೆಟ್ಟಿ ಹೇಳಿದ್ದಿಷ್ಟು
ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಡಾಟಾ ಎಂಟ್ರಿ ಆಪರೇಟರ್ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಸಿಂಡಿಕೇಟ್ ಅನುಮತಿ ನೀಡಲಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾಹಿತಿ ನೀಡಿದ್ದಾರೆ.
ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನೇಮಕಾತಿ ನಿಯಮಾವಳಿ ಪಾಲಿಸಲಾಗುವುದು. ಜೊತೆಗೆ ಪಿಹೆಚ್ಡಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ವಿದ್ಯಾರ್ಥಿನಿಯರು ನೇರವಾಗಿ ನನ್ನ ಗಮನಕ್ಕೆ ತರಬಹುದು. ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದರಾಚೆ ಯಾವುದೇ ಬೇಡಿಕೆಯಿಲ್ಲ, ಇದ್ದರು ಸಹ ನಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ.
ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ಪಿಹೆಚ್ಡಿ ಪದವಿ ಪ್ರದಾನ ವಿಚಾರದಲ್ಲಿ ವಿಜಯಪುರದ ಮಹಿಳಾ ವಿವಿ ಮೇಲೆ ಆರೋಪಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಕುಲಾಧಿಪತಿಗಳು ಆಗಿರುವ ರಾಜ್ಯಪಾಲರು ಗಮನ ಹರಿಸಬೇಕಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
