ಬೆಂಗಳೂರು: ಅಪ್ರಾಪ್ತ ವಯಸ್ಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ತಡೆಯಲು ಮತ್ತು ಮದ್ಯ ಸರಬರಾಜು ಮಾಡುವುದನ್ನು ನಿಷೇಧಿಸಲು ಬೆಂಗಳೂರಿನ ಎಲ್ಲಾ ಪಬ್ಗಳು, ಬ್ರೂವರೀಸ್, ಬಾರ್ಗಳು, ಕ್ಲಬ್ಗಳು, ಲಾಂಜ್ಗಳು ಹಾಗೂ ರೆಸ್ಟೋರೆಂಟ್ಗಳಿಗೆ ನೋಟಿಸ್ ಜಾರಿ ಮಾಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆಯ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ನಾಲ್ಕು ಶಿಕ್ಷಣ ಸಂಸ್ಥೆಗಳ ಪದವಿಪೂರ್ವ , ಪದವಿ ಮತ್ತು ಉನ್ನತ ಪ್ರೌಢ ತರಗತಿಗಳ 4,093 ವಿದ್ಯಾರ್ಥಿಗಳ ನಡುವೆ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ಗರದ ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಅಪಾಯದಲ್ಲಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಯುವಕರಲ್ಲಿ ಶೇ. 33 ರಷ್ಟು ಮಂದಿ ಮದ್ಯವನ್ನು ಬಳಸುತ್ತಿದ್ದರೆ, ಸುಮಾರು ಶೇ. 18 ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿದ್ದಾರೆ.
ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ. 8.7) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ. 7.9) ಗಣನೀಯವಾಗಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಇದು ಕರ್ನಾಟಕದ ಒಟ್ಟಾರೆ ಸರಾಸರಿಯಾದ ಶೇ. 4.7 (ತಂಬಾಕು) ಮತ್ತು ಶೇ. 8.5 ಕ್ಕಿಂತಲೂ (ಮದ್ಯಪಾನ) ತೀರಾ ಹೆಚ್ಚಾಗಿದೆ.ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷವಾಗಿದ್ದು, ಕೆಲವರು ಕೇವಲ 8 ವರ್ಷ ವಯಸ್ಸಿನಲ್ಲೇ ಈ ಹವ್ಯಾಸ ಆರಂಭಿಸಿದ್ದಾರೆ.
ಮಾರ್ಗಸೂಚಿ:
ಅಧಿಕೃತ ಐಡಿ ಕಡ್ಡಾಯ: ಯಾವುದೇ ವ್ಯಕ್ತಿಗೆ ವಯಸ್ಸಿನ ಅಧಿಕೃತ ಪುರಾವೆ ಇಲ್ಲದೆ ಪಬ್, ಬ್ರೂವರೀಸ್, ಬಾರ್ ಅಥವಾ ಕ್ಲಬ್ಗಳ ಒಳಗೆ ಪ್ರವೇಶ ನೀಡುವಂತಿಲ್ಲ.
ಕಡ್ಡಾಯ ವಯಸ್ಸಿನ ಪರಿಶೀಲನೆ: ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಅಥವಾ ಮದ್ಯವನ್ನು ಸರಬರಾಜು ಮಾಡುವ ಮುನ್ನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿ ವಯಸ್ಸನ್ನು ದೃಢೀಕರಿಸಿಕೊಳ್ಳಬೇಕು.
ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಅಪ್ರಾಪ್ತ ವಯಸ್ಕರಿಗೆ ಮದ್ಯ ಸರಬರಾಜು ಮಾಡುವ ಅಥವಾ ಅಪ್ರಾಪ್ತರ ಮದ್ಯಪಾನಕ್ಕೆ ಪ್ರಚೋದನೆ ನೀಡುವ ಸಂಸ್ಥೆಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು.
ವ್ಯವಸ್ಥಾಪಕರೇ ನೇರ ಹೊಣೆ: ಸಂಸ್ಥೆಯ ಆವರಣದೊಳಗೆ ನಡೆಯುವ ನಿಯಮ ಉಲ್ಲಂಘನೆಗಳಿಗೆ ಆಯಾ ಸಂಸ್ಥೆಯ ಮಾಲೀಕರು, ಮ್ಯಾನೇಜರ್ಗಳು, ಪರವಾನಗಿದಾರರು ಮತ್ತು ಕಾರ್ಯಕ್ರಮದ ಆಯೋಜಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಸಿಸಿಟಿವಿ ಕಣ್ಗಾವಲು: ಪ್ರವೇಶ ದ್ವಾರದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು. ತನಿಖೆಯ ಸಮಯದಲ್ಲಿ ನಿಯಮ ಪಾಲನೆಯನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು.
ಜಂಟಿ ಕಾರ್ಯಾಚರಣೆ: ಅಪ್ರಾಪ್ತ ವಯಸ್ಕರು ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳಿಗೆ ಬಲಿಯಾಗುವುದನ್ನು ತಡೆಯಲು ಪೊಲೀಸರು ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶೂನ್ಯ ಸಹಿಷ್ಣುತೆ: ಅಪ್ರಾಪ್ತ ವಯಸ್ಕರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ.
ಲಾಭಕ್ಕಿಂತ ಯುವ ಪೀಳಿಗೆಯ ಭವಿಷ್ಯ ಮುಖ್ಯ: ವಾಣಿಜ್ಯ ಸಂಸ್ಥೆಗಳು ನಮ್ಮ ಯುವ ಪೀಳಿಗೆಯ ಸುರಕ್ಷತೆ ಮತ್ತು ಭವಿಷ್ಯವನ್ನು ಬದಿಗಿಟ್ಟು ಕೇವಲ ಲಾಭ ಗಳಿಕೆಗೆ ಆದ್ಯತೆ ನೀಡಲು ಸಾಧ್ಯವಿಲ್ಲ. ಪೋಷಕರು, ಶಿಕ್ಷಕರು, ನಾಗರಿಕರು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಗೃಹ ಸಚಿವರು ತಿಳಿಸಿದ್ದಾರೆ.
