ಮಂಗಳೂರು: ಬಂಧಿಸಿ ಠಾಣೆಗೆ ಕರೆತರುತ್ತಿದ್ದ ವೇಳೆ ಐವರು ಪೊಲೀಸರ ಕಣ್ಣಿಗೆ ಮಣ್ಣು ಎರಚಿ, ಕೈಕೋಳ (ಹ್ಯಾಂಡ್ಕಫ್) ಸಮೇತ ಖತರ್ನಾಕ್ ಸರಗಳ್ಳನೊಬ್ಬ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಮಂಗಳೂರಿನ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಈತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಮಂಗಳೂರಿನ ಜಪ್ಪಿನಮೊಗರು ಬಳಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪಾಂಡೇಶ್ವರ ಠಾಣಾ ಪೊಲೀಸರಿಗೆ ಅಂತರರಾಜ್ಯ ಕಳ್ಳರ ಗ್ಯಾಂಗ್ ಕುರಿತು ಸುಳಿವು ಲಭಿಸಿತ್ತು. ಈ ಗ್ಯಾಂಗ್ನಲ್ಲಿ ಬಾಗಲಕೋಟೆಯ ಅಲ್ತಾಫ್ ಹುಸೇನ್, ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ ಎಂಬ ಇಬ್ಬರು ಸಹಚರರು ಸೇರಿಕೊಂಡಿದ್ದು, ವಾಹನ ಕಳ್ಳತನ, ಸರಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಗಳ ನಂತರ ಈ ಗ್ಯಾಂಗ್ ವಿವಿಧ ನಗರಗಳಿಗೆ ಪರಾರಿಯಾಗುತ್ತಿತ್ತು. ಹೈದರಾಬಾದ್, ಬಾಗಲಕೋಟೆ ಹಾಗೂ ಗದಗ್ ಸೇರಿದಂತೆ ಹಲವು ಕಡೆ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಖಚಿತ ಮಾಹಿತಿಯ ಮೇರೆಗೆ ಪಾಂಡೇಶ್ವರ ಠಾಣೆಯ ಪೊಲೀಸರು ಮೂವರನ್ನೂ ಮಂಗಳೂರು ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಬಂಧಿಸಿದ್ದರು. ಆದರೆ, ಅವರನ್ನು ಠಾಣೆಗೆ ಕರೆತರುತ್ತಿದ್ದ ವೇಳೆ ರೋಜಾರಿಯೋ ಚರ್ಚ್ ರಸ್ತೆಯ ಬಳಿ ಅಲ್ತಾಫ್ ಹುಸೇನ್ ಪೊಲೀಸರನ್ನು ತಳ್ಳಿಹಾಕಿ, ಕೈಕೋಳದೊಂದಿಗೆ ಓಡಿ ಪರಾರಿಯಾಗಿದ್ದಾನೆ. ಇದೇ ವೇಳೆ ಉಳಿದಿಬ್ಬರು ಸಹಚರರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಲ್ತಾಫ್ ಹುಸೇನ್ ಕೈಕೋಳದೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಓಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಪರಾರಿಯಾದ ಆರೋಪಿ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಲು ಮಂಗಳೂರು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
