ಮಂಗಳೂರು: ಮಂಗಳವಾರ ನಗರದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಗೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಗೈರುಹಾಜರಾಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯ ಆರಂಭದಲ್ಲಿ ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದ ಸಚಿವರು, ಪೊಲೀಸ್ ಕಮಿಷನರ್ ಗೈರಾಗಿರುವುದನ್ನು ಗಮನಿಸಿ ಪ್ರಶ್ನಿಸಿದರು. ಈ ವೇಳೆ ಕಮಿಷನರ್ ಪರವಾಗಿ ಡಿಸಿಪಿ ಸ್ಯಾಮ್ ವರ್ಗೀಸ್ ವಿವರಣೆ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಸಿಟ್ಟಾದ ಸಚಿವರು, ಕಮಿಷನರ್ ಗೈರುಹಾಜರಿಯ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತ ಮಾಹಿತಿ ನೀಡಿದ್ದಾರೆಯೇ ಎಂದು ತಾರಾಟೆಗೆ ತೆಗೆದುಕೊಂಡರು.
“ನಿಯಮಗಳು ಎಲ್ಲರಿಗೂ ಒಂದೇ. ಬೇರೆಯವರಿಗೆ ನಿಯಮಗಳನ್ನು ಹೇಳುವ ಹಿರಿಯ ಅಧಿಕಾರಿಗಳು ತಾವು ಅದನ್ನು ಪಾಲಿಸಬೇಡವೇ? ಕಮಿಷನರ್ ಅವರು ಜಿಲ್ಲಾಧಿಕಾರಿಗಳಿಗೆ ಮುಂಚಿತವಾಗಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆಯೇ?” ಎಂದು ಸಚಿವ ಖಾದರ್ ಪ್ರಶ್ನಿಸಿದರು.
ಯಾವುದೇ ಹಿರಿಯ ಅಧಿಕಾರಿಯೇ ಆಗಿರಲಿ, ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಒಂದು ದಿನ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ. ಅಧಿಕೃತ ಸಭೆಗಳಿಗೆ ಹಾಜರಾಗುವ ವಿಚಾರದಲ್ಲಿ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ. ನಿಯಮಗಳನ್ನು ಪ್ರತಿಯೊಬ್ಬ ಅಧಿಕಾರಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ಸೂಚಿಸಿದರು.















