ವ್ಯಾಪಾರಿಯೊಬ್ಬರಿಂದ ಬರೋಬ್ಬರಿ ₹8 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಜಿಎಸ್‌ಟಿ ಅಧೀಕ್ಷಕ (ಸೂಪರಿಂಟೆಂಡೆಂಟ್) ಮೋಹಿತ್ ಪ್ರತಾಪ್ ಸಿಂಗ್ ಅವರನ್ನು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಘಟನೆಯ ವಿವರ
ಕಬ್ಬಿಣದ ವ್ಯಾಪಾರ ನಡೆಸುತ್ತಿದ್ದ ಜಮೀರ್ ಎಂಬುವವರಿಗೆ ಜಿಎಸ್‌ಟಿ ವ್ಯವಹಾರದ ದೋಷ ಸರಿಪಡಿಸುವ ನೆಪದಲ್ಲಿ ಅಧಿಕಾರಿ ಮೋಹಿತ್ ಪ್ರತಾಪ್ ಸಿಂಗ್ ಬರೋಬ್ಬರಿ ₹20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಧಿಕಾರಿಯ ಒತ್ತಡ ತಾಳಲಾರದೆ ಸಂತ್ರಸ್ತ ವ್ಯಾಪಾರಿ ಲೋಕಾಯುಕ್ತ ಪೊಲೀಸರ ಮೊರೆ ಹೋಗಿ ಅಧಿಕೃತ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯಾಚರಣೆ ರೂಪಿಸಿದ್ದರು. ಮೊದಲ ಕಂತಿನ ಭಾಗವಾಗಿ ₹8 ಲಕ್ಷ ನಗದು ಹಣವನ್ನು ಜಮೀರ್ ಅವರಿಂದ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮೋಹಿತ್ ಪ್ರತಾಪ್ ಸಿಂಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಹಣ ಪಡೆಯುತ್ತಿದ್ದ ಸಂಪೂರ್ಣ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದು, ಅಕ್ರಮ ಹಣದ ಮೂಲ ಹಾಗೂ ಇತರೆ ಅಕ್ರಮಗಳ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ.















