ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ (46) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಆರೀಫ್ ಮಂಗಳೂರು ಆತ ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.2022ರ ಮೇ ತಿಂಗಳಲ್ಲಿ ಕೂಡ ಇದೇ ರೀತಿಯಲ್ಲಿ ಆರೀಫ್ ಮೇಲೆ ಕೊಲೆ ಯತ್ನ ನಡೆದಿತ್ತು. ಆಗ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ತಂಡವು ಚೂರಿಯಿಂದ ಇರಿದು ದಾಳಿ ನಡೆಸಿದ್ದರೂ, ಆತ ಪ್ರಾಣಾಪಾಯದಿಂದ ಪಾರಾಗಿದ್ದನು.
ಮೂಲತಃ ಕುದ್ರೋಳಿ ನಿವಾಸಿಯಾಗಿದ್ದ ಆರೀಫ್ ಕಳೆದ ಆರು, ಏಳು ವರ್ಷಗಳಿಂದ ಕುಟುಂಬ ಸಮೇತ ಅಜ್ಜಿನಡ್ಕ ಸಮೀಪದ ಮುಳ್ಳುಗುಡ್ಡೆಯಲ್ಲಿ ವಾಸವಿದ್ದನು. ಮೃತರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳನ್ನು ಅಗಲಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
