ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ಪ್ರಕಾರ, 10-12-2023ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಟ್ರೀ ಪಾರ್ಕ್ ಸಮೀಪದ ಮಂಗಳಾ ಬೋಟ್ ಯಾರ್ಡ್ನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ನ್ಯಾಯಾಲಯ ತೀರ್ಪು ನೀಡಿದೆ.
ಮೀನಗಾರಿಕಾ ಬೋಟ್ಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಮಂಗಳಾ ಬೋಟ್ ಯಾರ್ಡ್ನಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದ ಬಿನು.ಜಿ ಹಾಗೂ ಮರದ ಕೆಲಸ ಮಾಡುತ್ತಿದ್ದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಇವರಿಬ್ಬರ ನಡುವೆ ಕೆಲಸ ಮುಗಿದ ಬಳಿಕ ತಂಗುವ ಶೆಡ್ನಲ್ಲಿ ಹಣಕಾಸು ವಿಚಾರವಾಗಿ ಗಲಾಟೆ ಉಂಟಾಗಿತ್ತು. ಈ ವೇಳೆ ಆರೋಪಿ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್, ಬಿನುವಿನ ಎದೆಯ ಪಕ್ಕಕ್ಕೆ ಕಬ್ಬಿಣದ ಉಳಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆ ಯಲ್ಲಿ ಅ.ಕ್ರ.102/2023, ಕಲಂ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಎಸ್.ಸಿ. ನಂ.58/2024ರಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಕೇರಳ ಮೂಲದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ (53) ಎಂಬಾತನನ್ನು ಅಪರಾಧಿ ಎಂದು ತೀರ್ಮಾನಿಸಿದೆ.
ಆರೋಪಿಗೆ ಕಲಂ 302 ಐಪಿಸಿ ಅಡಿಯಲ್ಲಿ 5 ವರ್ಷಗಳ ಸಾದಾ ಕಾರಾವಾಸ ಹಾಗೂ ಕಲಂ 304(2) ಐಪಿಸಿ ಅಡಿಯಲ್ಲಿ ₹25,000 ದಂಡ ವಿಧಿಸಲಾಗಿದೆ.ಆರೋಪಿ ಜಾಮೀನು ಸಿಗದೆ ಸುಮಾರು 3 ವರ್ಷ 2 ತಿಂಗಳ ಕಾಲ ವಿಚಾರಣಾ ಬಂಧಿಯಾಗಿದ್ದ ವೇಳೆ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು ಅಪರಾಧ ಸಾಬೀತಾಗಿ ಶಿಕ್ಷೆ ಪ್ರಕಟಗೊಂಡಿದೆ.
ಪ್ರಕರಣದ ತನಿಖೆಯನ್ನು ಆಗಿನ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ (ಬಜಪೆ ಪೊಲೀಸ್ ಠಾಣೆ) ಭಾಗಶಃ ನಡೆಸಿ, ಬಳಿಕ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಎಂ. ಅವರು ಮುಂದುವರಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
