ಬೆಳ್ತಂಗಡಿ: ನಿಯಮ ಬಾಹಿರವಾಗಿ ಸಹೋದರನಿಗೆ ಗ್ರಾಮ ಪಂಚಾಯತ್ ನ ಕಾಮಗಾರಿ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆಯವರ ಸದಸ್ಯತ್ವ ಅನೂರ್ಜಿತಗೊಳಿಸಿ ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಆದೇಶ ನೀಡಿದ್ದಾರೆ.
ಅಂಡಿಂಜೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಹೆಗ್ಡೆಯವರು ತಮ್ಮ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ಕಾಮಗಾರಿಗಳನ್ನು ತನ್ನ ಸಹೋದರನಾದ ಅಮರೇಶ ಹೆಗ್ಡೆಯವರ ಮೂಲಕ ಗುತ್ತಿಗೆ ಪಡೆದು ನಿರ್ವಹಿಸಿದ್ದು, ನಿರ್ವಹಿಸಿದ ಎಲ್ಲಾ ಕಾಮಗಾರಿಗಳ ಬಗ್ಗೆ ಪಂಚಾಯತ್ ಅಳತೆ ಪುಸ್ತಕದಲ್ಲಿ ದಾಖಲಾಗಿದ್ದು,ಕಾಮಗಾರಿಗಳ ಸಂಬಂಧ ಬಿಲ್ ಪಾವತಿಗೆ ಜಗದೀಶ ಹೆಗ್ಡೆಯವರು ಸಹಕರಿಸಿ ಕರ್ತವ್ಯಲೋಪ ಎಸಗಿ ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ತನ್ನ ಸಹೋದರನಿಗೆ ಗುತ್ತಿಗೆ ನೀಡಿರುವ ಆರೋಪಗಳು ಸಾಬೀತು ಆಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ರ ಪ್ರಕರಣ 43(ಎ)(1) (v)ರನ್ವಯ ಸದಸ್ಯತ್ವ ರದ್ದುಗೊಳಿಸಿ ಯಾವುದೇ ಪಂಚಾಯತ್ ಗೆ ಮುಂದಿನ 6 ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳಾದ (ಗ್ರಾಮ ಪಂಚಾಯತ್) ಶಿವಕುಮಾರ ರವರು 05.01.2026 ರಂದು ಆದೇಶ ನೀಡಿರುತ್ತಾರೆ. ಜಗದೀಶ್ ಹೆಗ್ಡೆಯವರ ವಿರುದ್ಧ ಸ್ಥಳೀಯ ನಿವಾಸಿ ಹರೀಶ್ ಕುಮಾರ್ ಇವರು ಇಲಾಖೆಗೆ ದೂರು ನೀಡಿದ್ದರು.
