ಬಂಟ್ವಾಳ : ವಿದ್ಯುತ್ ಮೀಟರ್ ರೀಡರ್ ಮೇಲೆ ಸಾಕು ನಾಯಿ ದಾಳಿ ಮಾಡಿ ಕೈಗೆ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ನಡೆದಿದೆ.
ಮೂಲತಃ ಮುಡಿಪು ನಿವಾಸಿ, ಮೀಟರ್ ರೀಡರ್ ಸಿಬ್ಬಂದಿ ಮೇಲ್ವಿಚಾರಕ ಸಂಪತ್ ಆರ್.ಶೆಟ್ಟಿ ಸೋಮವಾರ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಮನೆಗಳ ಮೀಟರ್ ದಾಖಲಿಸಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ನ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ಮನೆಯೊಂದರಲ್ಲಿ ಕಟ್ಟಿ ಹಾಕಿದ್ದ ನಾಯಿ ಸಂಕೋಲೆ ಸಮೇತ ಓಡಿ ಬಂದು ದಾಳಿ ಮಾಡಿದ್ದು, ಬಲ ಕೈಯ ಮಾಂಸ ಕಿತ್ತು ಬಂದಿದೆ.ಸ್ಥಳೀಯರು ಬಂದು ನಾಯಿಯನ್ನು ಓಡಿಸಿದ್ದು, ಗಂಭೀರ ಗಾಯಗೊಂಡು ರಕ್ತ ಸುರಿಯುತ್ತಿದ್ದಂತೆಯೇ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡರು. ಇದೇ ವೇಳೆ ಸಿದ್ಧಕಟ್ಟೆ ಮೆಸ್ಕಾಂ ಎಂಜಿನಿಯರ್ ಯೋಗೀಶ್ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಂಗಳವಾರ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
