ಮಂಗಳೂರು : ಶಿಕ್ಷಕಿ ದಾಖಲಿಸಿದ ಅತ್ಯಾಚಾರ ಪ್ರಕರಣ ರದ್ದುಕೋರಿ ಅಮಾನತಿನಲ್ಲಿರುವ ಮೂಡುಬಿದಿರೆಯ ಇನ್ಸ್ಪೆಕ್ಟರ್ ಸಂದೇಶ್ಗೆ ಹೈಕೋರ್ಟ್ ತೀಕ್ಷ್ಣವಾಗಿ ಚಾಟಿ ಬೀಸಿದೆ. ಎಫ್ಐಆರ್ ರದ್ದುಕೋರಿ ಸಂದೇಶ ಹೈಕೋರ್ಟ್ ಮೆಟ್ಟಿಲೇದ್ದರು. ಆದರೆ ಹೈಕೋರ್ಟ್, ಇನ್ಸ್ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತೆ ಎಂದು ಸಂದೇಶ್ಗೆ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿದೆ.
ಸಂದೇಶ್ ಪರ ವಾದಿಸಿದ ವಕೀಲರು, ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು. ಇನ್ಸ್ಪೆಕ್ಟರ್ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಆಧಾರಗಳಿಲ್ಲ ಎಂದು ಹೇಳಿದರು. ಇನ್ಸ್ಪೆಕ್ಟರ್ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಇನ್ಸ್ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತೆ ಎಂದು ಖಾರವಾಗಿ ಪ್ರಶ್ನಿಸಿದ್ದು, ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಬಂಧಿಸದಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಿಬಿದಿರೆ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 376(2)(A)(1), 376(2)(n), 384, 506 ಅಡಿ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್, 2018ರಿಂದ 2023ರವರೆಗೆ ಮನೆಗೆ ಬಂದು ಅತ್ಯಾಚಾರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ಆರೋಪಿಸಿದ್ದಾರೆ. ಹಲವು ಕಾರಣಗಳನ್ನು ಹಿಡಿದು, ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. 2018ರಿಂದ 2023ರವರೆಗೆ ಸತತ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಜೀವ ಭಯ, ಮಾನ, ಕುಟುಂಬಸ್ಥರ ವಿರುದ್ಧವೂ ಬೆದರಿಕೆ ಹಾಕಿದ್ದ ಕಾರಣ ಮೌನವಾಗಿದ್ದೆ ಎಂದು ಶಿಕ್ಷಕಿ ದೂರಿನಲ್ಲಿ ಹೇಳಿದ್ದಾರೆ.
