ಇನ್ಮುಂದೆ ಪೊಲೀಸರು ನೋಟಿಸ್ ಅಥವಾ ಎಫ್ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೌದು ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯವಿದ್ದರೂ ಆರೋಪಿ ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ ಎಂದು ಹೇಳಿದೆ.
ಹೂಡಿಕೆದಾರರಿಗೆ ಲಕ್ಷಾಂತರ ಹಣ ವಂಚಿಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ 40 ದಿನಗಳ ಕಾಲ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಡಲೂರು ನಿವಾಸಿ ಯೋಗ ಶಿಕ್ಷಕ ಆರ್.ಯುಗದೇವ್ (34) ಎಂಬುವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ ಬಂಧನ ಆದೇಶವನ್ನು ರದ್ದುಪಡಿಸಬೇಕು. ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್) ಸೆಕ್ಷನ್ 35(3)ರ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್ ನೀಡಿಲ್ಲ. ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಆರೋಪಿ ಸಹಕರಿಸದ ಸಂದರ್ಭದಲ್ಲಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಹಜರ್ ಬರೆಯಬೇಕು. ಆ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರು ಈ ನಿಯಮಗಳನ್ನು ಪಾಲಿಸದ ಕಾರಣಕ್ಕೆ ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಆರೋಪಿ ವಾದಿಸಿದ್ದ.
ಈ ವಾದವನ್ನು ಸಾರಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಬಿಎನ್ಎಸ್ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಅಥವಾ ಎಫ್ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್ ಅಥವಾ ವಿದ್ಯುನ್ಮಾನ ವಿಧಾನದಲ್ಲಿ ತಲುಪಿಸಲು ಪೊಲೀಸರಿಗೆ ಅಧಿಕಾರವಿಲ್ಲ. ನೋಟಿಸ್ ಅನ್ನು ಭೌತಿಕವಾಗಿ ಆರೋಪಿಗೆ ತಲುಪಿಸುವುದು ಅನಿವಾರ್ಯ. ಈ ಕುರಿತು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಅಭಿಪ್ರಾಯಪಟ್ಟಿದೆ.
