ಹೊಸದಿಲ್ಲಿ: ಪಾಟ್ನಾದ ಸಮೀಪ ನಕಲಿ ಔಷಧಗಳು, ಮಾದಕ ದ್ರವ್ಯವನ್ನು ಉತ್ಪಾದಿಸುವ ಹಾಗೂ ಮರು ಪ್ಯಾಕ್ ಮಾಡುವ ಅಕ್ರಮ ಕಾರ್ಖಾನೆಯ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ಕ್ರೈಮ್ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬಿಹಾರದಲ್ಲಿ ಇದೇ ರೀತಿಯ ಎರಡು ಅಕ್ರಮ ಔಷಧ ಘಟಕಗಳು ಪತ್ತೆಯಾದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಈ ಹಿಂದೆ ಬಂಧಿತರಾದವರು ನೀಡಿದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.ಈ ಘಟಕದಿಂದ ನಕಲಿ ಮಾತ್ರೆಗಳು, ಸಿರಪ್ಗಳು, ಯಂತ್ರಗಳು ಹಾಗೂ ಪ್ಯಾಕೇಜಿಂಗ್ ಸಾಮಗ್ರಿಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅವಧಿ ಮೀರಿದ ಔಷಧಗಳನ್ನು ಮತ್ತೆ ಪ್ಯಾಕ್ ಮಾಡಿ ನಕಲಿ ವೈದ್ಯಕೀಯ ದಾರಿಗಳ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ವಿತರಿಸಲಾಗುತ್ತಿದೆ. ಇದು ಸಾರ್ವಜನಿಕರ ಜೀವಕ್ಕೆ ಗಂಭೀರ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
