ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದು, ಪಾಲಿಕೆ ಅಧಿಕಾರಿಗಳ ವಿಳಂಬ ನೀತಿಯ ವಿರುದ್ಧ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಒಂದು ವಾರದಿಂದ ಸಾರ್ವಜನಿಕರು ಪ್ರಮಾಣಪತ್ರಕ್ಕಾಗಿ ಪಾಲಿಕೆಗೆ ಅಲೆಯುತ್ತಿದ್ದಾರೆ. ಮಂಗಳವಾರ ಮುಂಜಾನೆಯಿಂದಲೇ ನೂರಕ್ಕೂ ಅಧಿಕ ಮಂದಿ ಕ್ಯೂನಲ್ಲಿ ನಿಂತಿದ್ದರೂ, ಮಧ್ಯಾಹ್ನ 3 ಗಂಟೆಯವರೆಗೆ ಕೌಂಟರ್ ತೆರೆದಿರಲಿಲ್ಲ. ಸಂಜೆ ವೇಳೆಗೆ ಕೌಂಟರ್ ತೆರೆದ ಸಿಬ್ಬಂದಿ, ಕೇವಲ 20 ಮಂದಿಗೆ ಮಾತ್ರ ಟೋಕನ್ ನೀಡುವುದಾಗಿ ಹೇಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಬೆಳಿಗ್ಗೆಯಿಂದ ಕೆಲಸ ಕಾರ್ಯ ಬಿಟ್ಟು ಸಾಲಿನಲ್ಲಿ ನಿಂತಿದ್ದೇವೆ. ಈಗ ಬಂದು ಕೇವಲ 20 ಟೋಕನ್ ಎಂದರೆ ಉಳಿದವರ ಗತಿಯೇನು? ಒಂದು ವಾರದಿಂದ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ,” ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೌಂಟರ್ ಮುಂಭಾಗ ಹಲವು ಜನರು ಜಮಾಯಿಸಿ ಸಿಬ್ಬಂದಿಗಳ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ದೂರದ ಊರುಗಳಿಂದ ಬಂದವರು ಬರಿಗೈಲಿ ವಾಪಸ್ಸಾಗುವಂತಾಗಿದೆ.
