ಕರ್ನಾಟಕದ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆಯು ತೀವ್ರವಾಗಿ ಕುಸಿದಿದ್ದು, ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ 1000-1200 ರೂ. ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 100-80 ರೂ.ಗೆ ಕುಸಿದಿದೆ. ಬೆಲೆ ಕುಸಿತದಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ ಬಂಡವಾಳವೂ ವಾಪಸ್ ಬಾರದೆ ಕಂಗಾಲಾಗಿದ್ದಾರೆ.
ಕೇವಲ ವಿಜಯನಗರ ಮಾತ್ರವಲ್ಲದೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರುಕಟ್ಟೆಗಳಲ್ಲೂ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಕೆಲವು ಕಡೆಗಳಲ್ಲಿ ವ್ಯಾಪಾರಿಗಳು 20 ರೂ.ಗೆ 2 ರಿಂದ 4 ಕೆಜಿ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದ್ದಾರೆ. ಇರಾನ್ – ಇಸ್ರೇಲ್ ಯುದ್ಧದಿಂದ ಬೇರೆ ದೇಶಗಳಿಗೆ ಟೊಮ್ಯಾಟೋ ರಫ್ತಾಗುತ್ತಿಲ್ಲ. ಅಲ್ಲದೇ ಸಿಲಿಂಡರ್ ಸಿಗದೇ ಹೋಟೆಲ್ಗಳು ಸರಿಯಾಗಿ ನಡೆಯದ ಹಿನ್ನೆಲೆ ಟೊಮ್ಯಾಟೋ ವ್ಯಾಪಾರ ಕುಸಿದಿದೆ. ಇದೇ ಕಾರಣಕ್ಕೆ ಟೊಮ್ಯಾಟೋ ಬೆಲೆ ಸಹ ಕುಸಿದಿದೆ ಎನ್ನಲಾಗಿದೆ.
ಬೆಲೆ ಎಷ್ಟರಮಟ್ಟಿಗೆ ಕುಸಿದಿದೆಯೆಂದರೆ, ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ತಗಲುವ ಸಾರಿಗೆ ವೆಚ್ಚ ಮತ್ತು ಕೂಲಿ ಹಣವನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಬೆಲೆ ಇಲ್ಲದ ಕಾರಣ ಕೆಲವು ರೈತರು ತಮ್ಮ ಬೆಳೆಯನ್ನು ರಸ್ತೆಬದಿಯಲ್ಲಿ ಸುರಿಯುತ್ತಿದ್ದಾರೆ. ಗಿಡಗಳಿಂದ ಕಟಾವು ಮಾಡದೆ ಬಿಡುತ್ತಿದ್ದಾರೆ. ತಮಿಳುನಾಡಿನ ಧರ್ಮಪುರಿ ಮತ್ತು ತಿರುಚ್ಚಿಯಂತಹ ಜಿಲ್ಲೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ವರದಿಯಾಗಿದೆ.
