ಬೆಂಗಳೂರು : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರು ಲೋಕಾಯುಕ್ತ ಪೊಲೀಸರು ಶನಿವಾರ ಸರ್ಕಾರಿ ಅಧಿಕಾರಿಯ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು 3.08 ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬಿಡಿಎ ವಲಯ ಅರಣ್ಯ ಅಧಿಕಾರಿ ಎ.ಎಲ್. ದಾಳೇಶ್ ಅವರ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ದಾಳೇಶ್ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿ ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಶೋಧ ಕಾರ್ಯದ ವೇಳೆ ಮೂರು ನಿವೇಶನ, ಎರಡು ವಾಸದ ಮನೆ, ಒಂದು ವಾಣಿಜ್ಯ ಸಂಕೀರ್ಣ, 17.20 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು 2.70 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿವೆ. 1.35 ಲಕ್ಷ ರೂ. ನಗದು, 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 34.50 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಸೇರಿದಂತೆ 48.85 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 3.08 ಕೋಟಿ ರೂ. ಎಂದು ಹೇಳಲಾಗಿದೆ.
