ಉಳ್ಳಾಲ: ಉಳ್ಳಾಲ ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 14 ಫಿಶ್ ಮೀಲ್ ಮತ್ತು ಫಿಶ್ ಆಯಿಲ್ ಫ್ಯಾಕ್ಟರಿಗಳಿಂದಾಗಿ ಇಡೀ ಉಳ್ಳಾಲ ಪರಿಸರದಲ್ಲಿ ಕಳೆದ ಕೆಲವು ವಾರಗಳಿಂದ 24 ಗಂಟೆಗಳ ಕಾಲ ಇತಿಹಾಸದಲ್ಲೇ ಕೇಳಿರದ ಮಟ್ಟದ ದುರ್ವಾಸನೆ ಹಬ್ಬಿದೆ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಜನರು ಮನೆಯೊಳಗೂ ಇರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ ಲಾರಿ, ರಾತ್ರಿ ಫ್ಯಾಕ್ಟರಿ – ಎರಡೂ ಕಿರುಕುಳ:
ಬೆಳಿಗ್ಗೆ 5 ಗಂಟೆಯಿಂದಲೇ ಮಂಗಳೂರು ಮತ್ತು ಕೇರಳದಿಂದ ಕೊಳೆತ ಮೀನು ಹೊತ್ತ ನೂರಾರು ಲಾರಿಗಳು ಉಳ್ಳಾಲದ ರಾಜರಸ್ತೆ ಮೂಲಕ ಕೋಟೆಪುರಕ್ಕೆ ಬರುತ್ತವೆ. ಈ ಲಾರಿಗಳು ಮೀನಿನ ರಕ್ತ, ಕೊಳೆತ ನೀರು ಮತ್ತು ಎಣ್ಣೆಯನ್ನು ರಸ್ತೆಯಲ್ಲೇ ಚೆಲ್ಲುತ್ತವೆ. ಇದರಿಂದ ರಸ್ತೆ ಜಾರುವಂತಾಗಿ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೆ ನಡೆದ ಫಿಶ್ ಆಯಿಲ್ ಸೋರಿಕೆ ಪ್ರಕರಣ ಇದಕ್ಕೆ ಸಾಕ್ಷಿ.
ರಾತ್ರಿಯಾದರೆ ಫ್ಯಾಕ್ಟರಿಗಳ ಬಾಯ್ಲರ್ ಮತ್ತು ಡ್ರೈಯರ್ ಗಳಿಂದ ಬರುವ ಗಬ್ಬು ವಾಸನೆಯಿಂದಾಗಿ ಮನೆಯಲ್ಲಿ ಬಟ್ಟೆ ಒಣಗಿಸಲು, ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು, ವೃದ್ಧರು, ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಶುರುವಾಗಿದೆ. ಹಾಕಿದ ಬಟ್ಟೆಗೆ ಕೂಡ ದುರ್ವಾಸನೆ ಹಿಡಿಯುತ್ತಿದೆ.
ಪರಿಸರ ಕಾನೂನು ಗಾಳಿಗೆ ತೂರಿದೆ:
ಈ ಫ್ಯಾಕ್ಟರಿಗಳು CRZ (ಕರಾವಳಿ ನಿಯಂತ್ರಣ ವಲಯ) ನಿಯಮಗಳನ್ನು ಉಲ್ಲಂಘಿಸಿ ನದಿ ಮತ್ತು ಸಮುದ್ರದಂಚಿನಲ್ಲಿ ಕಾರ್ಯಾಚರಿಸುತ್ತಿವೆ ಎಂದು 2016ರಲ್ಲೇ NGT (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಮುಚ್ಚಲು ಆದೇಶಿಸಿತ್ತು. ಆದರೆ ಮಾಲೀಕರು ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತಂದು ಇಂದಿಗೂ ಕಾರ್ಯಾಚರಿಸುತ್ತಿದ್ದಾರೆ.
ಪರಿಸರ ಮಾಲಿನ್ಯದ ನೆಪದಲ್ಲಿ ಬಿಗ್ ಬಾಸ್ ಶೋವನ್ನೇ ನಿಲ್ಲಿಸುವ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಉಳ್ಳಾಲದ 14 ಫ್ಯಾಕ್ಟರಿಗಳ ವಿಚಾರದಲ್ಲಿ ಯಾಕೆ ಮೌನವಾಗಿದೆ ಎಂಬುದು ಜನರ ಪ್ರಶ್ನೆ. ಆನ್ ಲೈನ್ ಮಾನಿಟರಿಂಗ್ ಇದೆ ಎಂದು ಹೇಳುವ ಮಂಡಳಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿಲ್ಲ.
ಸಾರ್ವಜನಿಕರ ಆಗ್ರಹಗಳು:
- KSPCB ತಕ್ಷಣ ಎಲ್ಲಾ 14 ಫ್ಯಾಕ್ಟರಿಗಳಿಗೆ ನೋಟಿಸ್ ನೀಡಿ, ದುರ್ವಾಸನೆ ನಿಯಂತ್ರಣ ವ್ಯವಸ್ಥೆ (Bio-filter, ETP) ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ರಾತ್ರಿ ವೇಳೆ ದಿಢೀರ್ ತಪಾಸಣೆ ನಡೆಸಬೇಕು.
- ಮೀನು ಸಾಗಿಸುವ ಲಾರಿಗಳಿಗೆ ಕಡ್ಡಾಯವಾಗಿ ಲೀಕ್ ಪ್ರೂಫ್ ಕಂಟೇನರ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ ಮಾಡಬೇಕು, ರಸ್ತೆಗೆ ತ್ಯಾಜ್ಯ ಚೆಲ್ಲುವ ಲಾರಿಗಳನ್ನು ವಶಕ್ಕೆ ಪಡೆಯಬೇಕು.
- CRZ ಉಲ್ಲಂಘನೆ ಮಾಡಿರುವ ಫ್ಯಾಕ್ಟರಿಗಳ ವಿರುದ್ಧ ಕ್ರಮ ಕೈಗೊಂಡು, ಜನವಸತಿ ಪ್ರದೇಶದಿಂದ ಸ್ಥಳಾಂತರಿಸಬೇಕು.
- ರಸ್ತೆಯಲ್ಲಿ ಜಾರಿ ಬಿದ್ದು ಗಾಯಗೊಂಡವರಿಗೆ ಫ್ಯಾಕ್ಟರಿ ಮಾಲೀಕರಿಂದಲೇ ಪರಿಹಾರ ಕೊಡಿಸಬೇಕು.
ಉಳ್ಳಾಲದ ಜನರು ಮೀನುಗಾರಿಕೆಗೆ, ಕೈಗಾರಿಕೆಗೆ ವಿರೋಧಿಗಳಲ್ಲ. ಆದರೆ ಕೈಗಾರಿಕೆಯ ಹೆಸರಿನಲ್ಲಿ ಇಡೀ ಊರನ್ನೇ ಅನಿಲ ಕೋಣೆಯನ್ನಾಗಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಬೇಕು ಇಲ್ಲವಾದಲ್ಲಿ ಗ್ರಾಮಸ್ಥರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- ಗೆ















