ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಬೆದರಿಸಿ 14 ಲಕ್ಷ ರೂ. ವಸೂಲಿ ಮಾಡಿದ ಯುವಕನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾರ್ಪಳ್ಳಿ ಬಲ್ಲಾಳ್ ನಗರದ ನಿವಾಸಿ ಮಹಿಮಾ (22) ಎಂಬಾಕೆಗೆ ಕೆ.ಆರ್.ಪೇಟೆಯ ಶರತ್ ಎಂಬಾತನು ಕಳೆದ 2ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದ. ಮೊದಲಿಗೆ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು 500, 1000, 2000 ರೂ. ಹೀಗೆ ಹಣವನ್ನು ಪಡೆದುಕೊಳ್ಳುತ್ತಿದ್ದನು.
ಈ ಹಣವನ್ನು ಮಹಿಮಾ ವಾಪಸ್ಸು ಕೇಳಿದಾಗ ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, ಕಳೆದ ಫೆಬ್ರವರಿ ತಿಂಗಳಲ್ಲಿ ಶರತ್ ಕರೆ ಮಾಡಿ ಮಹಿಮಾ ಬಳಿ 15ಲಕ್ಷ ಹಣವನ್ನು ಕೊಡುವಂತೆ ಕೇಳಿದ್ದ, ಆದರೆ ಅಷ್ಟು ಹಣ ಯಾಕೆ ಬೇಕೆಂದು ಕೇಳಿದಾಗ ಶರತ್ ತಂದೆಗೆ ಉಷಾರಿಲ್ಲ ಎಂದು ತಿಳಿಸಿದ್ದ, ಅಷ್ಟೊಂದು ಹಣ ಇಲ್ಲ ಎಂದು ಹೇಳಿದಾಗ ಆರೋಪಿ ಶರತ್ ಅವಾಚ್ಯ ಶಬ್ದಗಳಿಂದ ಪೋನಿನಲ್ಲಿ ಬೈದು ನೀನು ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಎಂದು ದೂರಲಾಗಿದೆ. ಬಳಿಕ ಯುವತಿ ಭಯಗೊಂಡು 14 ಲಕ್ಷ ರೂಪಾಯಿಯನ್ನು ಆರೋಪಿ ಒತ್ತಾಯ ಪೂರ್ವಕವಾಗಿ ಪಡೆದುಕೊಂಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.ಈ ಬಗ್ಗೆ ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ: 38/2026 ಕಲಂ 351(2), 352, 308(2) BNS ರಂತೆ ಪ್ರಕರಣ ದಾಖಲಾಗಿದೆ.
