ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಫ್ರಿಜ್ ಒಳಗೆ ಭ್ರೂಣವನ್ನು ಸಂರಕ್ಷಿಸಿ ಇಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ದಂಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಖಚಿತ ಮಾಹಿತಿಯ ಮೇರೆಗೆ ಸೋಮವಾರ ಸಂಜೆ ಕೊಡುಂಗಲ್ಲೂರು ಸಮೀಪದ ಚತೇದತುಪರಂಬುವಿನ ಫ್ಲಾಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ರೆಫ್ರಿಜರೇಟರ್ ಒಳಗೆ “AMY” ಎಂದು ಗುರುತಿಸಲಾದ ಹಸಿರು ಪೆಟ್ಟಿಗೆಯಲ್ಲಿ ಸುಮಾರು 3ರಿಂದ 4 ತಿಂಗಳ ವಯಸ್ಸಿನ ಭ್ರೂಣ ಪತ್ತೆಯಾಗಿದೆ.
ತ್ರಿಶೂರ್ ಜಿಲ್ಲೆಯ ಅನಪ್ಪುಳ ಮೂಲದ 23 ವರ್ಷದ ಯುವಕ ಹಾಗೂ ಎರ್ನಾಕುಲಂ ಜಿಲ್ಲೆಯ ಕೊಟ್ಟುವಳ್ಳಿಯ 28 ವರ್ಷದ ಮಹಿಳೆ ಈ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ, ದಂಪತಿಗಳು ತಮ್ಮ ವಿವಾಹಕ್ಕೆ ಒಂದು ವರ್ಷವಾಗಿದ್ದು, ಈವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಾರ್ಚ್ 20ರಂದು ರಾತ್ರಿ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಾತ್ರೂಮ್‌ನಲ್ಲಿ ಇದ್ದಾಗ ಭ್ರೂಣ ಹೊರಬಂದಿದೆ ಎಂದು ಹೇಳಿದ್ದಾರೆ.
ಮಹಿಳೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿರುವ ಹಿನ್ನೆಲೆ, ಪತಿ ಪಕ್ಕದ ಅಪಾರ್ಟ್‌ಮೆಂಟ್‌ನಿಂದ ಕತ್ತರಿ ತಂದುಕೊಟ್ಟ ನಂತರ, ಅವರು ಸ್ವತಃ ಹೊಕ್ಕುಳಬಳ್ಳಿಯನ್ನು ಕತ್ತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭ್ರೂಣವನ್ನು ತಕ್ಷಣ ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ, ಅದನ್ನು ಫ್ರಿಜ್‌ನಲ್ಲಿ ಇಟ್ಟಿದ್ದಾಗಿ ದಂಪತಿಗಳು ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಭ್ರೂಣವನ್ನು ವಿಧಿವಿಜ್ಞಾನ ತಜ್ಞರಿಂದ ಪರೀಕ್ಷೆಗೊಳಪಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ. ದಂಪತಿಗಳ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲಿಸಲು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.
