ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಹಿಂದಕ್ಕೆ ಬರುತ್ತಿದ್ದ ಬಸ್ಸೊಂದು ಕಂಡಕ್ಟರ್ ಬೇಜವಾಬ್ದಾರಿಯಿಂದಾಗಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಟ್ಲ-ಮುಡಿಪು-ಸ್ಟೇಟ್‌ಬ್ಯಾಂಕ್ ಸಂಚರಿಸುವ ಮಹೇಶ್ ಹೆಸರಿನ ಖಾಸಗಿ ಬಸ್ (KA 19 AF 4649) ವಿಟ್ಲದ ಖಾಸಗಿ ನಿಲ್ದಾಣದಲ್ಲಿ ಹಿಂದಕ್ಕೆ ಬರುತ್ತಿತ್ತು. ಇದೇ ಸಂದರ್ಭ ಇನ್ನೊಂದು ಬಸ್ಸಿಂದ ಇಳಿದು ಹೋಗುತ್ತಿದ್ದ ಮಹಿಳೆಗೆ ಮಹೇಶ್ ಬಸ್ ಡಿಕ್ಕಿ ಹೊಡೆದಿದೆ. ಮಹಿಳೆ ಬಸ್ಸಿನ ಅಡಿಗೆ ಬೀಳುತ್ತಿರುವುದನ್ನು ನೋಡನೋಡುತ್ತಲೇ ಸ್ಥಳೀಯ ಜ್ಯೂಸ್ ಅಂಗಡಿ ಮಾಲಿಕ ರಘುಶೆಟ್ಟಿಯವರು ಮತ್ತು ಆಟೋ ಚಾಲಕರು ಸಾಕಷ್ಟು ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಎಚ್ಚೆತ್ತ ಚಾಲಕ ಬಸ್ಸನ್ನು ನಿಲ್ಲಿಸಿದ್ದರಿಂದ ಮಹಿಳೆಯ ಪ್ರಾಣ ಉಳಿಯುವಂತಾಗಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಕೇಪು ಗ್ರಾಮದ ಕುದ್ದುಪದವು ಚೆಲ್ಯಡ್ಕ ನಿವಾಸಿ ಈಶ್ವರ ನಾಯ್ಕ ಎಂಬವರ ಪತ್ನಿ ಸುಶೀಲ (50 ವರ್ಷ) ಎಂದು ಗುರುತಿಸಲಾಗಿದೆ. ಅನಾರೋಗ್ಯದ ಕಾರಣಕ್ಕಾಗಿ ವಿಟ್ಲದ ಸುರಕ್ಷಾ ಆಸ್ಪತ್ರೆಗೆ ತೆರಳಲು ಅವರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ತನ್ನ ನಾದಿನಿ ಜಯಾ ಅವರ ಬಳಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರ ನಾದಿನಿ ಜಯಾ ಅವರು ಅಡ್ಕಸ್ಥಳದಿಂದ ಬಂದು ಅತ್ತಿಗೆಗಾಗಿ ಬಸ್ಸು ತಂಗುದಾಣದಲ್ಲಿ ಕಾಯುತ್ತಿದ್ದರು.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ಸುಶೀಲ ಅವರನ್ನು ರಕ್ಷಿಸಿದ್ದಾರೆ. ಗಾಯಾಳುವಿನ ಹಣೆಯ ಭಾಗಕ್ಕೆ ಮತ್ತು ಕೈಗೆ ತೀವ್ರತರದ ಗಾಯಗಳಾಗಿದ್ದು, ತಕ್ಷಣ ಅವರನ್ನು ವಿಟ್ಲ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದಾರೆ. ಪದೇ ಪದೇ ಅಪಘಾತಗಳು ನಡೆಯುತ್ತಿರುವ ಇಲ್ಲಿನ ಖಾಸಗಿ ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶದಲ್ಲಿ ಬಸ್ಸನ್ನು ಹಿಮ್ಮುಖವಾಗಿ ಚಲಿಸುವಾಗ ಚಾಲಕ ಮತ್ತು ನಿರ್ವಾಹಕರು ಬೇಜವಾಬ್ದಾರಿಯಿಂದ ವರ್ತಿಸುವುದು ಪ್ರತಿನಿತ್ಯ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕಂಡುಬರುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ಸಿಬ್ಬಂದಿಗಳು ಕರ್ತವ್ಯದಲ್ಲಿ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದೇ ಇಂತಹ ಅಪಘಾತಗಳು ಪುನರಾವರ್ತನೆಯಾಗಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿತನದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
