ಮಂಗಳೂರು : ಫೇಸ್ಬುಕ್ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಬ್ರಿಟನ್ನಿಂದ ಕಳುಹಿಸಿದ್ದಾನೆ ಎನ್ನಲಾದ ‘ಉಡುಗೊರೆ ಪಾರ್ಸೆಲ್’ ಬಿಡುಗಡೆಗೊಳಿಸುವ ನೆಪದಲ್ಲಿ, ಕಸ್ಟಮ್ಸ್ ಅಧಿಕಾರಿಯಂತೆ ನಟಿಸಿ ಗೃಹಣಿಯೊಬ್ಬರಿಂದ ಬರೋಬ್ಬರಿ ₹2,67,000 ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಗೃಹಣಿ ಶ್ರೀಮತಿ (46) ಅವರಿಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ “ಡಾ. ವಿಲಿಯಮ್ಸ್ ಹೆರ್ಬರ್ಟ್” ಎಂಬ ಪ್ರೊಫೈಲ್ನಿಂದ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್ಡಮ್ (UK) ಮೂಲದವನೆಂದು ಪರಿಚಯಿಸಿಕೊಂಡಿದ್ದ ಈತ, ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ದೂರುದಾರರ ವಿಶ್ವಾಸ ಗಳಿಸಿದ್ದ. ಜೂನ್ 28ರಂದು ವಾಟ್ಸಾಪ್ ಮೂಲಕ ಕರೆ ಮಾಡಿ, “ನಿಮಗಾಗಿ ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಅಪಾರ ಪ್ರಮಾಣದ ಹಣವಿರುವ ಪಾರ್ಸೆಲ್ ಕಳುಹಿಸಿದ್ದೇನೆ,” ಎಂದು ನಂಬಿಸಿದ್ದ.
ಇದರ ಬೆನ್ನಲ್ಲೇ ಜೂನ್ 29ರಂದು ‘ಕಸ್ಟಮ್ಸ್ ಆಫೀಸರ್’ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, “ನಿಮ್ಮ ಹೆಸರಿನಲ್ಲಿದ್ದ ಪಾರ್ಸೆಲ್ ಏರ್ಪೋರ್ಟ್ ಕಸ್ಟಮ್ಸ್ನಲ್ಲಿದೆ. ಲಗೇಜ್ ಚಾರ್ಜ್ ಪಾವತಿಸಿದರೆ ಬಿಡುಗಡೆ ಮಾಡುತ್ತೇವೆ,” ಎಂದಿದ್ದ. ಇದನ್ನು ನಂಬಿದ ಮಹಿಳೆ ತಮ್ಮ ಫೋನ್ ಪೇ ಮೂಲಕ ಆರಂಭದಲ್ಲಿ ₹28,000 ವರ್ಗಾಯಿಸಿದ್ದರು. ಜೂನ್ 30ರಂದು “ಪಾರ್ಸೆಲ್ನಲ್ಲಿದ್ದ ಚಿನ್ನ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ (Seized)” ಎಂದು ಹೆದರಿಸಿ, ಹಂತ ಹಂತವಾಗಿ ₹50,000, ₹26,000, ₹20,000 ಹಾಗೂ ಅಣ್ಣನ ಮಗನ ಫೋನ್ ಪೇ ಖಾತೆಯಿಂದ ₹26,000 ಮತ್ತು ₹30,000 ಸೇರಿ ಒಟ್ಟು ₹1,52,000 ಹಣ ಪಡೆದುಕೊಂಡಿದ್ದಾರೆ.
ಬಳಿಕ ಜುಲೈ 8ರಂದು ಮತ್ತೊಂದು ನಂಬರ್ನಿಂದ ಕರೆ ಮಾಡಿ “ಸಮಯಕ್ಕೆ ಪಾರ್ಸೆಲ್ ಪಡೆಯದ ಕಾರಣ ಪೆನಾಲ್ಟಿ ಚಾರ್ಜ್ ಕಟ್ಟಬೇಕು” ಎಂದು ತಿಳಿಸಲಾಗಿತ್ತು. ಅದರಂತೆ ಜುಲೈ 9ರಂದು ಮಹಿಳೆ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಚೆಕ್ ಮೂಲಕ ₹87,000 ವರ್ಗಾಯಿಸಿದ್ದರು. ಒಟ್ಟಾರೆಯಾಗಿ ₹2,67,000 ಪಾವತಿಸಿದರೂ ಆರೋಪಿಗಳು ಮತ್ತೆ ಮತ್ತೆ ಹಣಕ್ಕೆ ಒತ್ತಾಯಿಸಿದಾಗ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
