ಕಾಪು: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಪಾಂಗಾಳ ಕಟ್ಟಿಕೆರೆ ಬಳಿ ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಶ್ರೇಯಸ್ ಆಚಾರ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಏಪ್ರಿಲ್ 17ರ ಮುಂಜಾನೆ ಸುಮಾರು 12:30ರ ಸುಮಾರಿಗೆ ಮಂಗಳೂರಿನಿಂದ ಕೊಪ್ಪಳಕ್ಕೆ ಕೋಕ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಕಿಯಾ (Kia) ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. , ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಅಪಘಾತದ ತೀವ್ರತೆಗೆ ಚಾಲಕ ಶ್ರೇಯಸ್ ಆಚಾರ್ ಸೀಟಿನಲ್ಲೇ ಸಿಲುಕಿಕೊಂಡಿದ್ದರು. ತಲೆಗೆ ತೀವ್ರ ಗಾಯವಾಗಿದ್ದ ಅವರನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕಾರಿನಲ್ಲಿದ್ದ ಡಾರ್ವಿನ್ ಮತ್ತು ಸೂರ್ಯ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಕಾಪು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
