ಮಂಗಳೂರಿಗೆ ಖಡಕ್, ದಕ್ಷ ಪೊಲೀಸ್ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ನಿಯುಕ್ತಿಯಾದಂತೆ ಇಲ್ಲಿ ಮತೀಯ ಗಲಭೆಗಳು ಪುಲ್ ಸ್ಟಾಪ್. ದ್ವೇಷ ಕಾರುವ ಭಾಷಣಕಾರರ ಪುಂಗಿ ಬಂದ್. ಡ್ರಗ್ಸ್ ದಂಧೆಕೋರರು ಗಪ್ ಚುಪ್. ಇದರ ಜೊತೆಗೆ ಮಸಾಜ್ ಪಾರ್ಲರ್ ಅಡ್ಡಾದಿಡ್ಡಿ ಕಸುಬಿ ಕೂಡ ಪೂರ್ತಿ ಬಾಗಿಲು ಹಾಕಿತ್ತು. ಇವಿಷ್ಟೇ ಅಲ್ಲ ರಮ್ಮಿ ಮೂಲಕ ಜೂಜು ಕೇಂದ್ರ ತೆರೆದು ಮಧ್ಯಮವರ್ಗದವರನ್ನು ಪೂರ್ತಿ ಬೋಳಿಸುತ್ತಿದ್ದ ಸ್ಕಿಲ್ ಗೇಮ್ ಅನ್ನುವ ಅಡ್ಡೆ ಬಾಗಿಲು ಹಾಕಿ ದಂಧೆಕೋರರು ಇಲ್ಲಿಂದ ಪಲಾಯನ ಮಾಡಿದ್ದರು. ಈ ಕಮೀಷನರ್ ಇರುವವರೆಗೂ ನಮ್ಮ ಆಟ ನಡೆಯಲ್ಲ ಎಂದು ಮಂಗಳೂರಿನಿಂದಲೇ ಕಾಲ್ಕಿತ್ತಿದ್ದರು ರಮ್ಮಿ ಜೂಜುಕೋರರು.

ಆದರೆ ಇದೀಗ ಮತ್ತೆ ಮಂಗಳೂರಿನಲ್ಲಿ ‘ಎಕ್ಕಾ ರಾಜಾ ರಾಣಿ’ ಬಾಗಿಲು ತೆಗೆದು ಕಾರ್ಯಾಚರಿಸುವ ಬಗ್ಗೆ ದೊಡ್ಡದೊಂದು ಮಾಹಿತಿ ಲಭ್ಯವಾಗಿದ್ದು, ಮಂಗಳೂರು ತುಂಬೆಲ್ಲ ಜುಗಾರಿ ಅಡ್ಡೆಯ ಕೇಂದ್ರವಾಗಿ ಬಿಡುತ್ತದೋ ಅನ್ನುವ ವಾಸನೆ ಬರತೊಡಗಿದೆ. ಮಂಗಳೂರು ನಗರದ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ, ಜ್ಯೋತಿ, ಕಂಕನಾಡಿ, ಬೈಕಂಪಾಡಿ, ಸುರತ್ಕಲ್ ಪ್ರದೇಶದಲ್ಲಿ ಮತ್ತೆ ಸ್ಕಿಲ್ ಅಟ್ಟಹಾಸಕ್ಕೆ ಸಜ್ಜುಗೊಳ್ಳುತ್ತಿದ್ದು, ಇದರ ಜೊತೆ ‘ಗುತ್ತುದ ಗೊಬ್ಬು’ ಕೂಡ ಆರಂಭಕ್ಕೆ ಮುನ್ಸೂಚನೆ ಸಿಕ್ಕಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
ಮಂಗಳೂರು ನಗರದಲ್ಲಿ ದಕ್ಷ, ಖಡಕ್ ಪೊಲೀಸ್ ಕಮೀಷನರ್ ಇರುವಾಗಲೇ ಮತ್ತೆ ರಮ್ಮಿ ಆಟ ಬಾಗಿಲು ಓಪನ್ ಆಗಲು ಸಾದ್ಯವಿಲ್ಲ. ಇದರ ಹಿಂದಿನ ಸೂತ್ರಧಾರ ಯಾರು? ಮಂಗಳೂರು ಮಹಾನಗರ ಪಾಲಿಕೆ ಅಥವಾ ಆರೋಗ್ಯ ಇಲಾಖೆಯಿಂದಲೇ ಅನುಮತಿ ನೀಡಲಾಗುತ್ತಿದೆಯೇ? ಈಗಾಗಲೇ ದಂಧೆಕೋರರು ಕೆಲವು ಕಡೆಗಳಲ್ಲಿ ಆಟ ಆರಂಭಿಸಿದ್ದಾರಂತೆ! ಮತ್ತೆ ಮಂಗಳೂರು ಕುಲಗೆಡುತ್ತದೆಯೋ..? ದಕ್ಷ ಕಮೀಷನರ್ ಇರುವಾಗಲೇ ಮಂಗಳೂರು ತುಂಬಾ ಜುಗಾರಿ ಅಡ್ಡೆ ತೆರೆಯಲು ಕೆಲವೊಂದು ಮಂದಿ ತಯಾರಿ ನಡೆಸಿದ್ದಾರೆ. ವೈಟ್ ಕಾಲರ್ ಮಂದಿ ಸಾಥ್ ಕೂಡ ನೀಡಿದ್ದಾರಂತೆ. ಈ ಹೊಸ ಬೆಳವಣಿಗೆ ಮಂಗಳೂರನ್ನು ಮತ್ತೆ ಆತಂಕಕ್ಕೆ ತಳ್ಳಲಿದೆ.
