ಕರಾವಳಿ ನಿಯಂತ್ರಣ ವಲಯ (CRZ) ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಸಮುದ್ರ ತೀರದ ಅತ್ಯಂತ ಸೂಕ್ಷ್ಮ ವಲಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಕ್ರಮವಾಗಿ ಪರವಾನಗಿ (ಲೈಸನ್ಸ್) ಹಾಗೂ ಮೆಸ್ಕಾಂ (MESCOM) NOC ನೀಡಿರುವ ಆಘಾತಕಾರಿ ಮಹಾ ಹಗರಣವೊಂದು ಇದೀಗ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಮೂಗಿನ ನೇರಕ್ಕೇ ನಡೆದಿರುವ ಈ ಕಾನೂನುಬಾಹಿರ ದಂಧೆ ಇಡೀ ಉಡುಪಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಸಮುದ್ರದ ಪಕ್ಕದಲ್ಲೇ ತಲೆಯೆತ್ತಿರುವ ಈ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಾಣಿಜ್ಯ ಕಟ್ಟಡಗಳಿಗೆ ಸಿ.ಆರ್.ಜೆಡ್ ಜಂಟಿ ನಿರ್ದೇಶಕರಿಂದ ಯಾವುದೇ ಅಧಿಕೃತ ನಿರಾಕ್ಷೇಪಣಾ ಪತ್ರ (NOC) ಸಿಕ್ಕಿಲ್ಲ. ಆದರೂ ಕೆಮ್ಮಣ್ಣು ಪಂಚಾಯತ್ ಮಾತ್ರ ಯಾವ ಧೈರ್ಯದ ಮೇಲೆ ರಾಜಾರೋಷವಾಗಿ ಪರವಾನಗಿ ನೀಡಿದೆ? ಇದರ ಹಿಂದೆ ಕೈಬದಲಾದ ಕೈ ಬೆಚ್ಚಗಾಗಿಸುವ ಮೊತ್ತವೆಷ್ಟು?
ಕಟ್ಟಡ ನಿರ್ಮಾಣಕ್ಕೆ ಮೂಲಭೂತವಾಗಿ ಬೇಕಾದ ಸಿ.ಆರ್.ಜೆಡ್ ಕ್ಲಿಯರೆನ್ಸ್ ಇಲ್ಲದಿದ್ದರೂ, ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್ ವತಿಯಿಂದ ಮೆಸ್ಕಾಂಗೆ ನಿರಾಕ್ಷೇಪಣಾ ಪತ್ರ ನೀಡಿರುವುದು ಯಾವ ಕಾನೂನಿನ ಅಡಿಯಲ್ಲಿ? ಈ ಅಕ್ರಮದ ಜಾಲ ಎಲ್ಲೆಲ್ಲಿಗೆ ಹರಡಿಕೊಂಡಿದೆ ಎನ್ನುವುದು ಉನ್ನತ ಮಟ್ಟದ ತನಿಖೆಯಾಗಬೇಕಿದೆ.
ನಿಯಮಗಳ ಪ್ರಕಾರ ಬೃಹತ್ ವಾಣಿಜ್ಯ ಕಟ್ಟಡಗಳ ನಿರ್ಮಾಣದ ವೇಳೆ ಕಾರ್ಮಿಕ ಕಲ್ಯಾಣ ನಿಧಿಗೆ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ. ಈ ಕೋಟ್ಯಂತರ ಮೌಲ್ಯದ ರೆಸಾರ್ಟ್‌ಗಳಿಂದ ನಿಖರವಾಗಿ ಎಷ್ಟು ಶುಲ್ಕ ವಸೂಲಿ ಮಾಡಲಾಗಿದೆ? ಅಥವಾ ಇಲ್ಲಿಯೂ ಕೂಡ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದಾರೆಯೇ? ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.
ಕರಾವಳಿ ತೀರ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಬೃಹತ್ ಕಟ್ಟಡಗಳು ತಲೆಯೆತ್ತುತ್ತಿದ್ದರೂ, ಸಿ.ಆರ್.ಜೆಡ್ ಕಾವಲು ಕಾಯಬೇಕಾದ ಅಧಿಕಾರಿಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಬೇಕಾದ ಉಡುಪಿ ಲೋಕಾಯುಕ್ತ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರಾ? ಅಥವಾ ಕಣ್ಣಿದ್ದು ಕುರುಡರಾಗಿದ್ದಾರಾ? ಎಂಬ ಆಕ್ರೋಶದ ನುಡಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
“ಯಾವ ಕಾನೂನಿನ ಅಡಿಯಲ್ಲಿ ಕೆಮ್ಮಣ್ಣು ಪಂಚಾಯತ್ ಈ ಕೋಟಿಗಟ್ಟಲೆ ಬೆಲೆಬಾಳುವ ಕಟ್ಟಡಗಳಿಗೆ ಲೈಸನ್ಸ್ ಮತ್ತು ಮೆಸ್ಕಾಂ NOC ನೀಡಿದೆ ಎಂಬುದರ ಬಗ್ಗೆ ಜಿಲ್ಲಾಡಳಿತ ಹಾಗೂ ಲೋಕಾಯುಕ್ತ ತಕ್ಷಣವೇ ಸುಮೊಟೊ (Suo Motu) ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸಬೇಕು. ನಿಯಮ ಉಲ್ಲಂಘಿಸಿ ಕಟ್ಟಲಾದ ಕಟ್ಟಡಗಳ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಿ, ಅಕ್ರಮಕ್ಕೆ ಸಾಥ್ ನೀಡಿದ ಪಂಚಾಯತ್ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ ವಹಿಸಿದ ಸಿ.ಆರ್.ಜೆಡ್ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.”
