ಮಂಗಳೂರು : ಪಡೀಲ್ನಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದ ಬಳಿ ನಿಲ್ಲಿಸಲಾಗಿದ್ದ ಆರಣ್ಯ ಇಲಾಖೆಯ ಅಧಿಕೃತ ವಾಹನವನ್ನೇ ಕದ್ದು ಪರಾರಿಯಾಗಿದ್ದ ಕೇರಳ ಮೂಲದ ಖದೀಮನನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ನಿವಾಸಿ ನದೀಮ್ (23) ಬಂಧಿತ ಆರೋಪಿಯಾಗಿದ್ದಾನೆ.ಮಂಗಳೂರು ಪಡೀಲ್ನ ಅರಣ್ಯ ಇಲಾಖೆಯ ವಸತಿ ಗೃಹದ ಆವರಣದಲ್ಲಿ ಸಂಚಾರಿ ದಳದ ಆರ್ಎಫ್ಒ (RFO) ಸಂತೋಷ್ ರೈ ಅವರಿಗೆ ಸೇರಿದ ವಾಹನವನ್ನು ಚಾಲಕ ಸೋಮವಾರ ರಾತ್ರಿ ಎಂದಿನಂತೆ ನಿಲ್ಲಿಸಿದ್ದರು. ಮುಂಜಾನೆ ಕೇರಳದಿಂದ ಮಂಗಳೂರಿಗೆ ಬಂದಿದ್ದ ಆರೋಪಿ ನದೀಮ್, ವಸತಿಗೃಹದ ಆವರಣಕ್ಕೆ ನುಗ್ಗಿ ಜೀಪಿನ ಗಾಜು ಒಡೆದಿದ್ದಾನೆ. ಬಳಿಕ ಜೀಪಿನ ಡ್ರಾಯರ್ನಲ್ಲಿದ್ದ ಮತ್ತೊಂದು ಕೀಯನ್ನು ಪತ್ತೆಹಚ್ಚಿ, ವಾಹನದ ಸೈರನ್ ವೈರ್ ಅನ್ನು ತುಂಡು ಮಾಡಿ ಜೀಪಿನೊಂದಿಗೆ ಪರಾರಿಯಾಗಿದ್ದನು.ಜೀಪ್ ಎಗರಿಸಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಆರೋಪಿ ನದೀಮ್, ಕೂಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಡೀಸೆಲ್ ಹಾಕಿಸಿಕೊಂಡಿದ್ದಾನೆ. ಆದರೆ ಹಣ ನೀಡದೆ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದಲೂ ಪರಾರಿಯಾಗಿದ್ದನು. ಇದರಿಂದ ಅನುಮಾನಗೊಂಡ ಬಂಕ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಜೀಪ್ ನಂಬರ್ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಅದು ಅರಣ್ಯ ಸಂಚಾರಿ ದಳದ ಜೀಪು ಎಂಬುದು ಬೆಳಕಿಗೆ ಬಂದಿತ್ತು.ಮರುದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಚಾಲಕ ಬಂದು ನೋಡಿದಾಗ ಜೀಪು ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಆರ್ಎಫ್ಒ ಸಂತೋಷ್ ರೈ ಅವರಿಗೆ ಮಾಹಿತಿ ನೀಡಿದ್ದಾರೆ. ಆರ್ಎಫ್ಒ ಅವರು ಜೀಪಿನಲ್ಲಿದ್ದ ಜಿಪಿಎಸ್ (GPS) ಲೊಕೇಶನ್ ಟ್ರ್ಯಾಕ್ ಮಾಡಿದಾಗ, ಜೀಪು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಮೂಡುಗೋಪಾಡಿ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ನಿಂತಿರುವುದು ಪತ್ತೆಯಾಗಿದೆ.ಮಂಗಳೂರಿನ ಅಧಿಕಾರಿಗಳು ತಕ್ಷಣವೇ ಕುಂದಾಪುರ ಭಾಗದ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಅಲರ್ಟ್ ಮಾಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಎಚ್ಚೆತ್ತ ಆರೋಪಿ ನದೀಮ್, ಜೀಪನ್ನು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಜಿಪಿಎಸ್ ಲೊಕೇಶನ್ ಅನ್ನು ಲೈವ್ ಆಗಿ ಗಮನಿಸುತ್ತಿದ್ದ ಆರ್ಎಫ್ಒ ನೀಡಿದ ನಿಖರ ಮಾಹಿತಿ ಆಧಾರದ ಮೇಲೆ ಸಿಬ್ಬಂದಿ ಜೀಪನ್ನು ಜಾಣ್ಮೆಯಿಂದ ಅಡ್ಡಗಟ್ಟಿದ್ದಾರೆ. ಸಿಕ್ಕಿಬೀಳುವ ಭೀತಿಯಿಂದ ಜೀಪನ್ನು ರಸ್ತೆಯಲ್ಲೇ ಬಿಟ್ಟು ಓಡಲು ಯತ್ನಿಸಿದ ನದೀಮ್ನನ್ನು ಬೆನ್ನಟ್ಟಿ ಹೆಡೆಮುರಿ ಕಟ್ಟಲಾಗಿದೆ.ಜೀಪು ಕಳವಾದ ಬಗ್ಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕಂಕನಾಡಿ ಪೊಲೀಸರು ಕುಂದಾಪುರಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
