ಜಮೀನಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 5.50 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಎಸಿ ಕಾವ್ಯಾರಾಣಿ ಹಾಗೂ ಕಚೇರಿಯ ಗುಮಾಸ್ತ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
10 ಲಕ್ಷ ರೂಪಾಯಿಗೆ ಬೇಡಿಕೆ!
ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ನಾಲ್ಕೂವರೆ ಎಕರೆ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿಯನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿತ್ತು. ಆದರೂ ಕೆಲಸ ಮಾಡಿಕೊಡಲು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಕುರಿತು ಬೆಂಗಳೂರು ಮೂಲದ ಸಂತ್ರಸ್ತೆ ಡಾ. ರೂಪಾ ಅವರು ಮೈಸೂರು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪಕ್ಕಾ ಯೋಜನೆ ರೂಪಿಸಿದ ಲೋಕಾಯುಕ್ತ ಪಡೆ, ಎಸಿ ಕಾವ್ಯಾರಾಣಿ ಅವರು ಮಧ್ಯಾಹ್ನದ ಭೋಜನಕ್ಕಾಗಿ ತಮ್ಮ ಅಧಿಕೃತ ನಿವಾಸಕ್ಕೆ ತೆರಳಿದ್ದ ಸಮಯವನ್ನು ಬಳಸಿಕೊಂಡಿತು. ಕಚೇರಿಯ ಸಿಬ್ಬಂದಿ ಶಿವಕುಮಾರ್ ಮುಖಾಂತರ ದೂರುದಾರರಿಂದ 5.50 ಲಕ್ಷ ರೂಪಾಯಿ ಮುಂಗಡ ಹಣವನ್ನು ಪಡೆಯಲಾಗಿತ್ತು. ಗುಮಾಸ್ತನಿಂದ ಆ ಹಣವನ್ನು ತಮ್ಮ ಮನೆಯಲ್ಲಿಯೇ ಸ್ವೀಕರಿಸುತ್ತಿದ್ದಂತೆಯೇ, ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದ ಮೂರು ತಂಡಗಳು ಮನೆಗೆ ಏಕಾಏಕಿ ದಾಳಿ ನಡೆಸಿ, ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದವು.
ಪ್ರಸ್ತುತ ಲೋಕಾಯುಕ್ತ ಪೋಲಿಸರು ಎಸಿ ಕಾವ್ಯಾರಾಣಿ ಹಾಗೂ ಗುಮಾಸ್ತ ಶಿವಕುಮಾರ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ.















