ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಗುರುಗಂಗಾ, ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಯ ಬಿಡುತ್ತಿರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಕೂಡಲೇ 3 ಕೈಗಾರಿಕೆ ಮುಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲೆ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಮೆ.6H ಇಂಡಸ್ಟ್ರೀಸ್, ಮೆ. ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ. ಹಿಮಾಲಯ ಕೈಗಾರಿಕೆಗಳಿಗೆ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವ ಆದೇಶ (ಕ್ಲೋಷರ್ ಆರ್ಡರ್) ಹೊರಡಿಸಿ, ಅನುಸರಣಾ ವರದಿಯನ್ನು 24 ಗಂಟೆಯೊಳಗಾಗಿ ಈ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.
ಮತ್ತೆ ಈ ಕೈಗಾರಿಕೆಗಳು ಕಾರ್ಯಾಚರಣೆ ಮಾಡಿದ್ದು, ಕೈಗಾರಿಕಾ ತ್ಯಾಜ್ಯ ಜಲ ಮೂಲಗಳನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತವಾಗುತ್ತಿರುವ ಕಾರಣ ಜಲ, ಪರಿಸರ ಸಂರಕ್ಷಣೆ, ಸಾರ್ವಜನಿಕರ ಹಿತದೃಷ್ಟಿ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.















