ತಿಂಗಳಿಗೆ ಶೇಕಡಾ 3ರಷ್ಟು ಅಧಿಕ ಲಾಭಾಂಶ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಗೆ ಬರೋಬ್ಬರಿ ₹2,110 ಕೋಟಿ ವಂಚಿಸಿದ ಆರೋಪದಡಿ ‘ಶಿವಂ ಅಸೋಸಿಯೇಟ್ಸ್’ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣವರ್ನನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.

ಮಂಗಳೂರು ಉಪ ವಲಯ ಕಚೇರಿಯ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಶಿವಾನಂದ್ನನ್ನು ಬಂಧಿಸಿದ್ದು, ವಿಚಾರಣೆಗಾಗಿ 12 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ವಂಚನೆ ಪ್ರಕರಣದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲೂ ಸಂಸ್ಥೆಯು ವಿಸ್ತಾರವಾದ ವಂಚನಾ ಜಾಲವನ್ನು ಹೊಂದಿರುವುದು ಪತ್ತೆಯಾಗಿದೆ. ಡಿಜಿಟಲ್ ವೇದಿಕೆಗಳು ಮತ್ತು ಸ್ಥಳೀಯ ಏಜೆಂಟರ ಮುಖಾಂತರ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಲಾಗಿತ್ತು. ಹೂಡಿಕೆದಾರರನ್ನು ಸೆಳೆಯಲು ಮಧ್ಯವರ್ತಿಗಳಿಗೆ ಶೇಕಡಾ 0.5ರಷ್ಟು ಕಮಿಷನ್ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರಿಂದ ಷೇರು ಮಾರುಕಟ್ಟೆಯಲ್ಲಿ ಅನುಭವಿಸಿದ ಭಾರಿ ಆರ್ಥಿಕ ನಷ್ಟವನ್ನು ಮುಚ್ಚಿಡಲು ಆರೋಪಿ ಪೋನ್ಜಿ ಯೋಜನೆಯ ದಾರಿ ಹಿಡಿದಿದ್ದ. ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನೇ ಹಳೆಯ ಠೇವಣಿದಾರರಿಗೆ ಲಾಭಾಂಶವೆಂದು ನೀಡಿ ನಂಬಿಕೆ ಉಳಿಸಿಕೊಳ್ಳುವ ನಾಟಕವಾಡುತ್ತಿದ್ದ.
ಸಾರ್ವಜನಿಕರಿಂದ ಅಕ್ರಮವಾಗಿ ಲೂಟಿ ಮಾಡಿದ ಹಣವನ್ನು ‘ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’, ‘ಶಿವಂ ಪ್ರೊಡಕ್ಷನ್ಸ್’ ಸೇರಿದಂತೆ ಆರೋಪಿಯ ಸ್ವಂತ ಹಾಗೂ ಕುಟುಂಬಸ್ಥರ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಹಣದಿಂದ ಐಷಾರಾಮಿ ಬಂಗಲೆಗಳು, ದುಬಾರಿ ವಾಹನಗಳ ಖರೀದಿ ಹಾಗೂ ಚಲನಚಿತ್ರ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಇ.ಡಿ ಮಾಹಿತಿ ನೀಡಿದೆ.















