ಬೆಂಗಳೂರು: ರಾಜ್ಯಾದ್ಯಂತ ನಡೆಸಲಾದ ವಿಶೇಷ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ವೇಳೆ ಹಲವು ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ (FBOs) ಸ್ವಚ್ಛತೆ, ಸುರಕ್ಷತೆ ಮತ್ತು ನೈರ್ಮಲ್ಯದ ಲೋಪಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಲಹಾ ಪ್ರಕಟಣೆಯನ್ನು (Advisory) ಹೊರಡಿಸಿದೆ.
ತಪಾಸಣೆಯ ವೇಳೆ ಕಂಡುಬಂದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಉದ್ದಿಮೆದಾರರಿಗೆ ನಿಗದಿತ ಕಾಲಾವಕಾಶ ನೀಡಲಾಗಿದ್ದು, ನಂತರ ನಡೆಯುವ ಮರುತಪಾಸಣೆಯಲ್ಲಿ ನಿಯಮ ಉಲ್ಲಂಘನೆ ಮುಂದುವರಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಆಹಾರ ಉದ್ದಿಮೆದಾರರಿಗೆ ಕಡ್ಡಾಯ ಮಾರ್ಗಸೂಚಿಗಳು:
FSSAI ಪರವಾನಗಿ: ಎಲ್ಲಾ ಆಹಾರ ತಯಾರಕರು ಮತ್ತು ಮಾರಾಟಗಾರರು ಕಡ್ಡಾಯವಾಗಿ ಮಾನ್ಯತೆ ಪಡೆದ FSSAI ಪರವಾನಗಿ ಅಥವಾ ನೋಂದಣಿ ಹೊಂದಿರಬೇಕು ಹಾಗೂ ಅದರ ಷರತ್ತುಗಳನ್ನು ಪಾಲಿಸಬೇಕು.
ಗುಣಮಟ್ಟ ಮತ್ತು ಕಚ್ಚಾವಸ್ತುಗಳ ಸಂಗ್ರಹ: ಅವಧಿ ಮೀರಿದ, ಕೊಳೆತ, ಕಲುಷಿತ ಅಥವಾ ಹಾಳಾದ ಪದಾರ್ಥಗಳನ್ನು ಬಳಸಬಾರದು. ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಕಚ್ಚಾವಸ್ತು ಖರೀದಿಸಬೇಕು ಹಾಗೂ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಪರಿಶೀಲಿಸಬೇಕು.
ಅಡುಗೆಮನೆ ಸ್ವಚ್ಛತೆ ಮತ್ತು ಕೀಟ ನಿಯಂತ್ರಣ: ಅಡುಗೆಮನೆ, ನೆಲ, ಗೋಡೆಗಳು ಸದಾ ಸ್ವಚ್ಛವಾಗಿರಬೇಕು. ಜಿರಳೆ, ಇಲಿ ಹಾಗೂ ಕೀಟಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಪೆಸ್ಟ್ ಕಂಟ್ರೋಲ್ (Pest Control) ವ್ಯವಸ್ಥೆ ಮಾಡಬೇಕು.
ತಾಪಮಾನ ಮತ್ತು ಸುರಕ್ಷಿತ ನೀರು: ಹಾಲು, ಮಾಂಸ, ಮೊಟ್ಟೆಯಂತಹ ಶೀಘ್ರ ಹಾಳಾಗುವ ಪದಾರ್ಥಗಳನ್ನು ನಿಗದಿತ ಶೀತಲೀಕರಣ ತಾಪಮಾನದಲ್ಲಿಡಬೇಕು. ಆಹಾರ ಮತ್ತು ಪಾನೀಯಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ನೀರು/ಐಸ್ ಬಳಸಬೇಕು.
ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ: ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಸ್ವಚ್ಛ ಉಡುಪು, ಹೆಡ್ ಕ್ಯಾಪ್, ಏಪ್ರನ್ ಧರಿಸಬೇಕು ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಬೇಕು.
ತ್ಯಾಜ್ಯ ನಿರ್ವಹಣೆ ಮತ್ತು ದಾಖಲೆ: ಮುಚ್ಚಳವಿರುವ ಕಸದ ಬುಟ್ಟಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು ಹಾಗೂ ಖರೀದಿ, ತರಬೇತಿ ಮತ್ತು ಸ್ವಚ್ಛತೆಯ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸಬೇಕು.
ಗಡುವು ಮುಗಿದ ಬಳಿಕ ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯಾದ್ಯಂತ ದಿಢೀರ್ ಮರುತಪಾಸಣೆ ನಡೆಸಲಿದ್ದು, ನಿಯಮ ಪಾಲಿಸದ ಸಂಸ್ಥೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.















