ಕೆಪಿಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದು, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರ ಬಂಧನದ ಬೆನ್ನಲ್ಲೇ ಇದೀಗ ಪ್ರಕರಣದಲ್ಲಿದ್ದ ಮತ್ತೊಬ್ಬ ಪ್ರಮುಖ ಮಧ್ಯವರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಐಎಎಸ್ ಅಧಿಕಾರಿಗೆ ಅಕ್ರಮ ಎಸಗಲು ನೇರವಾಗಿ ನೆರವು ನೀಡಿದ್ದ ಆರೋಪದ ಮೇಲೆ ಈ ಮಧ್ಯವರ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಸ್ತುತ ಆತನನ್ನು ಸಿಐಡಿ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಇದಕ್ಕೂ ಮುನ್ನ, ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಸಿಐಡಿ ಸುದೀರ್ಘ ವಿಚಾರಣೆಗೆ ಗುರಿಪಡಿಸಿತ್ತು. ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಆರಂಭಗೊಂಡು ಸುಮಾರು 11 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದರೂ, ಅಧಿಕಾರಿ ತನಿಖೆಗೆ ಸೂಕ್ತ ಸಹಕಾರ ನೀಡದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಅವರನ್ನು ಅಧಿಕೃತವಾಗಿ ಬಂಧಿಸಲಾಗಿತ್ತು. ಈ ಬಿಗ್ ಬ್ರೇಕಿಂಗ್ ಸುದ್ದಿಯನ್ನು ನಿಮ್ಮ ‘ಪಬ್ಲಿಕ್ ಟಿವಿ’ ಮೊದಲು ಪ್ರಸಾರ ಮಾಡಿತ್ತು.
ಐಎಎಸ್ ಅಧಿಕಾರಿಯ ಬಂಧನದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸಿಐಡಿ ತಂಡ, ಹಗರಣದ ಬೇರುಗಳನ್ನು ಹುಡುಕಲು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಪ್ರಭಾವಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ನಡುವಿನ ಹಣಕಾಸಿನ ವಹಿವಾಟು ಮತ್ತು ನೆರಮನೆಯ ಕೊಂಡಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖಾಧಿಕಾರಿಗಳು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನು ಹಲವು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ.















