ಮಂಗಳೂರು: 2017ರಲ್ಲಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂದಿಗಳ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಹಾಗೂ ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು 16 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ(ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ.
ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರ ಮೇಲೆ ಮಂಗಳೂರು ಜೈಲಿನಲ್ಲಿ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿತ್ತು.
2017ರ ಸೆಪ್ಟೆಂಬರ್ 11ರಂದು ಮಧ್ಯಾಹ್ನ 12.30ರ ಸುಮಾರಿಗೆ ಮಂಗಳೂರು ಜಿಲ್ಲಾ ಕಾರಾಗೃಹದ ಹೊಸ ಕಟ್ಟಡದ ‘ಬಿ’ ಬ್ಲಾಕ್‌ನ ವರಾಂಡದಲ್ಲಿ ಘಟನೆ ನಡೆದಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ವಿಚಾರಣಾ ಬಂದಿಗಳಾದ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ತಮ್ಮ ಪ್ರಕರಣದ ವಿಚಾರಣಾ ದಿನಾಂಕ ತಿಳಿದುಕೊಳ್ಳಲು ಕಾರಾಗೃಹ ಅಧೀಕ್ಷಕರ ಕಚೇರಿಗೆ ತೆರಳುತ್ತಿದ್ದ ವೇಳೆ ಆರೋಪಿಗಳು ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯು ಇತರ 15 ಆರೋಪಿಗಳೊಂದಿಗೆ ಸೇರಿಕೊಂಡು ಸಂಚು ರೂಪಿಸಿ ಇಬ್ಬರು ವಿಚಾರಣಾ ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿಗಳು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿರುವುದಲ್ಲದೆ, ಪೈಪ್ ನಿಂದ ನವನೀತ್ ಶೆಟ್ಟಿಯವರ ತಲೆ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿದ್ದಾರೆ. ಬಳಿಕ ಅವರನ್ನು ವರಾಂಡದಿಂದ ಕೆಳಗಿನ ಅಂಗಳಕ್ಕೆ ಎಳೆದು ಹಾಕಲಾಗಿದೆ.
ಇದೇ ವೇಳೆ ಸ್ಟೀಲ್ ಡ್ರಮ್‌ನಿಂದ ನವನೀತ್ ಶೆಟ್ಟಿಯವರ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ಪ್ರಮುಖ ಆರೋಪಿಯು ಕೇರಂ ಬೋರ್ಡ್‌ನಿಂದ ತಲೆಗೆ ಹೊಡೆಯಲು ಮುಂದಾಗಿ ಕೊಲೆ ಯತ್ನ ನಡೆಸಿದ್ದು, ಜೈಲು ಸಿಬ್ಬಂದಿಯೊಬ್ಬರು ತಡೆದಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.
ಹಲ್ಲೆ ತಡೆಯಲು ಬಂದ ಜೈಲು ಸಿಬ್ಬಂದಿಯ ಸಮವಸ್ತ್ರವನ್ನು ಪ್ರಮುಖ ಆರೋಪಿ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಉಳಿದ ಆರೋಪಿಗಳೂ ಭದ್ರತಾ ಸಿಬ್ಬಂದಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ನವನೀತ್ ಶೆಟ್ಟಿಯವರ ತಂದೆ ಭಾಸ್ಕರ ಶೆಟ್ಟಿಯವರ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಲಾಗಿದ್ದು, ಇಲ್ಲದಿದ್ದರೆ ₹5 ಲಕ್ಷ ಹಣ ತಂದುಕೊಡುವಂತೆ ಒತ್ತಾಯಿಸಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರಿಗೆ ಗಾಯಗಳಾಗಿದ್ದು, ವೈದ್ಯಕೀಯ ದೃಢಪತ್ರ ಹಾಗೂ ತನಿಖೆಯಿಂದ ಆರೋಪಗಳು ದೃಢಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆ ಅ.ಕ್ರ. 130/2017ರಲ್ಲಿ ಕಲಂ 120(B), 143, 147, 148, 341, 323, 324, 384, 506, 307, 353 ಜೊತೆಗೆ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬರ್ಕೆ ಪೊಲೀಸರು 14-11-2017ರಂದು 16 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು 14 ಆರೋಪಿಗಳು ದೋಷಿಗಳಾಗಿದ್ದಾರೆಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಇವರ ಪೈಕಿ ಲಾಯ್ ವೇಗಸ್, ಧನರಾಜ್ ಪೂಜಾರಿ ಹಾಗೂ ಅಭಿಷೇಕ್ ಅವರು ಇತರ ಪ್ರಕರಣಗಳಲ್ಲಿ ಈಗಾಗಲೇ ಜೈಲು ಬಂಧನದಲ್ಲಿದ್ದಾರೆ. ಉಳಿದ 10 ಮಂದಿಯನ್ನು ನ್ಯಾಯಾಲಯದ ಆದೇಶದಂತೆ ನಿನ್ನೆ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ನಿನ್ನೆ ನ್ಯಾಯಾಲಯಕ್ಕೆ ಗೈರಾಗಿದ್ದಾನೆ.
ಪ್ರಕರಣದ ಆರೋಪಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 16ರಂದು ನ್ಯಾಯಾಲಯ ಪ್ರಕಟಿಸಲಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ..















