ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್ ವಿಭಾಗದ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ರ್ಯಾಗಿಂಗ್ ನಡೆಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ತ್ರಿಶೂರ್ ಮೂಲದ 19 ವರ್ಷದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಹಾಗೂ ಅವರ ಸಹಪಾಠಿಯೊಬ್ಬರು ರ್ಯಾಗಿಂಗ್ಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸೆಪ್ಟೆಂಬರ್ 19ರಂದು ಮಧ್ಯಾಹ್ನ ಕಾಲೇಜಿನ ಹೊರಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸೀನಿಯರ್ ವಿದ್ಯಾರ್ಥಿಗಳ ಗುಂಪು ಅವರನ್ನು ಅಡ್ಡಗಟ್ಟಿ ಬೈಕ್ನಲ್ಲಿ ಕರೆದೊಯ್ದು, ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿ ಹಾಕಿತ್ತು ಎನ್ನಲಾಗಿದೆ.
ದೂರಿನ ಪ್ರಕಾರ, ಇಬ್ಬರು ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿ, ಅವರು ಕಿರುಚದಂತೆ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಬಳಿಕ ಬೆಲ್ಟ್ ಹಾಗೂ ಹ್ಯಾಂಗರ್ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಆರೋಪಿಗಳ ಪೈಕಿ ಓರ್ವ ವಿದ್ಯಾರ್ಥಿಯೊಬ್ಬನ ಕುತ್ತಿಗೆ ಹಾಗೂ ತಲೆಗೆ ‘ಕಬ್ಬಿಣದ ಪಂಚ್’ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಬಸವಳಿದ ವಿದ್ಯಾರ್ಥಿಗಳು ನೀರು ಕೇಳಿದಾಗ ಕಲುಷಿತ ನೀರನ್ನು ಅವರ ಮೈಮೇಲೆ ಚೆಲ್ಲಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಡೀ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದ ಬಳಿಕ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಚಾಕುವಿನಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಕಾಲೇಜಿಗೆ ಬರುವಾಗ ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು ಹಾಗೂ ಶೂ ಧರಿಸಬಾರದು ಎಂಬಂತೆ ಸೀನಿಯರ್ ವಿದ್ಯಾರ್ಥಿಗಳು ಸೂಚಿಸಿದ್ದರು ಎನ್ನಲಾಗಿದೆ.
ಘಟನೆಯಿಂದ ಭಯಭೀತರಾದ ವಿದ್ಯಾರ್ಥಿಗಳು ಊರಿಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಕುಟುಂಬಸ್ಥರ ಧೈರ್ಯದ ಮೇರೆಗೆ ಮಂಗಳೂರಿಗೆ ಮರಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ನಾಸೀದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ. ಹಾಗೂ ಶಿನಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಿ ಬೇಡ, ಕಾನೂನು ಕ್ರಮವಾಗಲಿ ಎಂಬ ಆಗ್ರಹ
ರ್ಯಾಗಿಂಗ್ ಆರೋಪದಂತಹ ಗಂಭೀರ ಪ್ರಕರಣವನ್ನು ಯಾವುದೇ ರೀತಿಯ ರಾಜಿ-ಸಂಧಾನದ ಮೂಲಕ ಮುಗಿಸಬಾರದು ಎಂಬ ಆಗ್ರಹ ಕೇಳಿಬರುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಇಂತಹ ಕೃತ್ಯಗಳ ಬಗ್ಗೆ ಪೊಲೀಸರು ಮತ್ತು ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಆರೋಪಗಳು ತನಿಖೆಯಿಂದ ಸಾಬೀತಾಗಬೇಕಿದ್ದು, ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯಂತೆ ತನಿಖೆ ನಡೆಸಿ ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬುದು ಪೋಷಕರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.
ವಿದ್ಯಾರ್ಥಿಗಳ ಮೇಲೆ ನಡೆಯುವ ರ್ಯಾಗಿಂಗ್ಗೆ ಕಡಿವಾಣ ಹಾಕಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತ್ವರಿತಗೊಳಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.















