ಲಕ್ನೋ: ಪ್ರೇಯಸಿಗೆ ತನ್ನ ಸಂಪೂರ್ಣ ಆಸ್ತಿಯನ್ನು ಬರೆಯಬಹುದು ಎಂಬ ಆತಂಕದಿಂದ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಔಷಧಿ ವ್ಯಾಪಾರಿ ವಿನೀತ್ ಮನೋಚಾ (60) ಕೊಲೆಯಾದ ವ್ಯಕ್ತಿ. ಇಂದಿರಾನಗರದಲ್ಲಿರುವ ತಮ್ಮ ಫ್ಲಾಟ್ನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮನೋಚಾ ಅವರ ಮೃತದೇಹ ಪತ್ತೆಯಾಗಿತ್ತು. ಪೊಲೀಸರ ತನಿಖೆಯಲ್ಲಿ ಪುತ್ರನೇ ತಂದೆಯ ಹತ್ಯೆ ಮಾಡಿರುವುದು ಬಹಿರಂಗವಾಗಿದೆ.
ವಿನೀತ್ ಅವರ ಮತ್ತೊಬ್ಬ ಪುತ್ರ ಸುಬ್ರತ್ ಹಾಗೂ ಪತ್ನಿ ಶಾಲು ಪಾರ್ಟಿಗೆ ತೆರಳಿದ್ದ ಸಂದರ್ಭದಲ್ಲಿ ವಿನೀತ್ ಮನೆಯಲ್ಲಿ ಒಬ್ಬರೇ ಇದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಪುತ್ರ ವಿಶಾಲ್ ಸಂಚು ರೂಪಿಸಿ ತಂದೆಯನ್ನು ಕೊಲೆ ಮಾಡಿದ್ದಾನೆ. ಆರಂಭಿಕ ತನಿಖೆಯಲ್ಲಿ ವಿನೀತ್ ಅವರ ಸೊಸೆಯೇ ಈ ಪಿತೂರಿಯ ಹಿಂದಿರುವ ಪ್ರಮುಖ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಜೊತೆಗೆ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಮತ್ತು ಆತನ ಸಹಚರ ರಾಜ್ಕಿಶೋರ್ನನ್ನೂ ಬಂಧಿಸಲಾಗಿದೆ.
ತಂದೆಯ ಹತ್ಯೆ ಕುರಿತು ಸುಬ್ರತ್ ನೀಡಿದ ದೂರಿನಲ್ಲಿ, ವಿನೀತ್ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಸಂಪೂರ್ಣ ಆಸ್ತಿಯನ್ನು ಮತ್ತೊಬ್ಬ ಮಹಿಳೆಗೆ ನೀಡಲು ತಂದೆ ನಿರ್ಧರಿಸಿದ್ದರು. ಇದೇ ಕಾರಣದಿಂದ ತನ್ನ ಸಹೋದರ ತಂದೆಯನ್ನು ಹತ್ಯೆ ಮಾಡಿದ್ದಾನೆ ಎಂದು ಸುಬ್ರತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕರೆ ವಿವರಗಳ ದಾಖಲೆಗಳು (CDRs), ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಮತ್ತು ವೈಜ್ಞಾನಿಕ ಸಾಕ್ಷ್ಯಗಳು, ವಶಪಡಿಸಿಕೊಂಡ ವಸ್ತುಗಳು ಸೇರಿದಂತೆ ಇತರ ಪರೋಕ್ಷ ಸಾಕ್ಷ್ಯಗಳನ್ನು ಪರಿಶೀಲಿಸುವ ಮೂಲಕ ಪಿತೂರಿಯ ಸುಳಿವು ಪತ್ತೆಯಾಗಿದೆ ಎಂದು ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.















