ವಿಲ್ ಮೂಲಕ ಕುಟುಂಬದ ಹಿರಿಯರಿಂದ ಬಂದ ಜಮೀನಿನ ಉತಾರ (ಹಕ್ಕು) ನೀಡಲು ₹40,000 ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ (VA) ಸೋಮನಾಥ.ಟಿ ಹಾಗೂ ಗ್ರಾಮ ಸಹಾಯಕ ಹನುಮೇಶ ಬಂಧಿತ ನೌಕರರಾಗಿದ್ದಾರೆ.
ಅಂಜನಹಳ್ಳಿಯ ನಿವಾಸಿ ಶ್ರೀರಾಮು ವೆಂಕಟೇಶ ಎಂಬುವರು ತಮ್ಮ ಜಮೀನನ್ನು ತಮ್ಮ ಹೆಸರಿಗೆ ಉತಾರ ಮಾಡಿಕೊಡುವಂತೆ ಕೋರಿ ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಮಾಡಿಕೊಡಲು ಆರೋಪಿ ನೌಕರರು ₹40,000 ಲಂಚ ನೀಡುವಂತೆ ಪಟ್ಟು ಹಿಡಿದು ಸತಾಯಿಸುತ್ತಿದ್ದರು. ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಶ್ರೀರಾಮು ಅವರು ಅಂತಿಮವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಮಂಗಳವಾರ ಆನೆಗೊಂದಿಯ ಪೆಟ್ರೋಲ್ ಬಂಕ್ ಬಳಿ ದೂರುದಾರರಿಂದ ಆರೋಪಿಗಳು ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಇಬ್ಬರನ್ನೂ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ. ಬಳಿಕ ಆರೋಪಿಗಳನ್ನು ಗಂಗಾವತಿಯ ಸರ್ಕ್ಯೂಟ್ ಹೌಸ್ಗೆ ಕರೆದೊಯ್ದು ಮಹಜರು ನಡೆಸಲಾಯಿತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಸುನೀಲ ಮ್ಯಾಗಳಮನಿ, ಶೈಲಾ ಎಸ್. ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.















