ಗುಜರಾತ್ : ಮೊಬೈಲ್ ಚಟ ಹಾಗೂ ಸಾಮಾಜಿಕ ಜಾಲತಾಣದ ಕ್ಷುಲ್ಲಕ ಜಗಳಗಳು ಗುಜರಾತ್‌ನ ಸೂರತ್ ನಗರದಲ್ಲಿ ಎರಡು ಪ್ರತ್ಯೇಕ ಭೀಕರ ದುರಂತಗಳಿಗೆ ಕಾರಣವಾಗಿವೆ.
ಮೊಬೈಲ್‌ನಲ್ಲಿ ಆಟ ಆಡುವುದನ್ನು ತಡೆದು ಫೋನ್ ಒಡೆದು ಹಾಕಿದ ತಂದೆಯನ್ನೇ ಮಗಳು ಕುಕ್ಕರ್ ಮುಚ್ಚಳ ಹಾಗೂ ಚಾಕುವಿನಿಂದ ಇರಿದು ಕೊಂದರೆ, ಇನ್ನೊಂದು ಘಟನೆಯಲ್ಲಿ ವಾಟ್ಸಾಪ್ ಗ್ರೂಪ್ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಸೂರತ್‌ನ ಕೋಸಾದ್ ಪ್ರದೇಶದಲ್ಲಿ ಮೊಬೈಲ್ ಗೇಮ್ ಚಟಕ್ಕೆ ಬಿದ್ದಿದ್ದ ಮಗಳಿಗೆ ಬುದ್ಧಿವಾದ ಹೇಳಲು ಹೋದ ತಂದೆ ರಮೇಶ್ ಚೌಹಾಣ್ (55) ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಸಂಬಂಧ ಮಗಳು ಕಾಜಲ್ (22) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಸಂಜೆ ರಮೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ, ಪತ್ನಿ ಮಂಜು ಅವರು “ಮಗಳು ಸದಾ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕುಳಿತಿರುತ್ತಾಳೆ, ಮನೆ ಕೆಲಸಕ್ಕೆ ಕಿಂಚಿತ್ತೂ ನೆರವಾಗುತ್ತಿಲ್ಲ” ಎಂದು ದೂರಿದ್ದಾರೆ. ಇದರಿಂದ ಕುಪಿತಗೊಂಡ ರಮೇಶ್, ಗೇಮ್ ನಿಲ್ಲಿಸಿ ಮನೆಕೆಲಸ ಮಾಡುವಂತೆ ಮಗಳಿಗೆ ತಾಕೀತು ಮಾಡಿದ್ದಾರೆ. ಆಕೆ ಮಾತು ಕೇಳದಿದ್ದಾಗ ಆಕ್ರೋಶಗೊಂಡ ತಂದೆ, ಆಕೆಯ ಕೈಯಲ್ಲಿದ್ದ ಮೊಬೈಲ್ ಕಸಿದು ನೆಲಕ್ಕೆ ಬಡಿದು ಒಡೆದು ಹಾಕಿದ್ದಾರೆ.
ಇದರಿಂದ ತೀವ್ರ ಕೆರಳಿದ ಕಾಜಲ್, ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್‌ನ ಮುಚ್ಚಳದಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಬಳಿಕ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಮೇಶ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮಂಜು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾಜಲ್‌ನನ್ನು ಬಂಧಿಸಿದ್ದಾರೆ.
ಸೂರತ್‌ನ ನಾನ್‌ಪುರ ಪ್ರದೇಶದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ವಾಟ್ಸಾಪ್ ಗ್ರೂಪ್‌ನಲ್ಲಿ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುವ ವಿಚಾರವಾಗಿ ನಡೆದ ಜಗಳ ಇಬ್ಬರು ಬಾಲಕರ ಹತ್ಯೆಯಲ್ಲಿ ಅಂತ್ಯವಾಗಿದೆ. ಮೊಹಮ್ಮದ್ ಫೈಜಾನ್ ಶೇಖ್ (17) ಮತ್ತು ಅಜ್ಮಲ್ ಶೇಖ್ (17) ಕೊಲೆಯಾದ ದುರ್ದೈವಿಗಳು.
ಘಟನೆಯ ವಿವರ:
ಸ್ಥಳೀಯ ಯುವಕರು ‘ಸಲ್ಮಾನ್ ಖಾನ್’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಪರಸ್ಪರ ಚಾಟ್ ಮಾಡುತ್ತಿದ್ದರು. ಭಾನುವಾರ ಸಂಜೆ ಬಾಲಕನೊಬ್ಬ ಕುದುರೆ ರೇಸ್‌ನ ಹಲವು ವಿಡಿಯೋಗಳನ್ನು ಗ್ರೂಪ್‌ಗೆ ಅಪ್‌ಲೋಡ್ ಮಾಡಿದ್ದ. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಗ್ರೂಪ್‌ನಲ್ಲಿ ತೀವ್ರ ವಾಗ್ವಾದ ಶುರುವಾಗಿದೆ.
ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ, ಆರೋಪಿ ಬಾಲಕ ತನ್ನ ಇಬ್ಬರು ಸ್ನೇಹಿತರೊಂದಿಗೆ ಫೈಜಾನ್ ಮತ್ತು ಅಜ್ಮಲ್ ಇರುವ ಪ್ರದೇಶಕ್ಕೆ ತೆರಳಿ ನೇರವಾಗಿ ಗಲಾಟೆ ಆರಂಭಿಸಿದ್ದಾನೆ. ಜಗಳದ ನಡುವೆಯೇ ಜೇಬಿನಲ್ಲಿದ್ದ ಚಾಕು ತೆಗೆದು ಇಬ್ಬರಿಗೂ ಮನಬಂದಂತೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 17 ವರ್ಷದ ಮುಖ್ಯ ಆರೋಪಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.















