ಮಹಾರಾಷ್ಟ್ರ : ಹಬ್ಬದ ಸಂದರ್ಭದಲ್ಲಿ ಕಲಬೆರಕೆ ತಡೆಯಲು ಮಹಾರಾಷ್ಟ್ರದಲ್ಲಿ ಆಹಾರ, ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಸುಮಾರು 9.01 ಕೋಟಿ ರೂಪಾಯಿ ಮೌಲ್ಯದ 3.53 ಲಕ್ಷ ಕೆಜಿ ಆಹಾರ ಪದಾರ್ಥ ಜಪ್ತಿ ಮಾಡಿಕೊಂಡಿದ್ದಾರೆ. ಪತಂಜಲಿ ಆಯುರ್ವೇದದ ಪ್ರಮುಖ ವಿತರಕ ಸಂಸ್ಥೆ ಸೇರಿದಂತೆ 19 ಆಹಾರ ಉದ್ಯಮಗಳ ಪರವಾನಗಿಯನ್ನು FDA ಅಮಾನತುಗೊಳಿಸಿದೆ.
ಛತ್ರಪತಿ ಸಂಭಾಜಿನಗರದ ಪತಂಜಲಿ ಆಯುರ್ವೇದದ ಸೂಪರ್ ಡಿಸ್ಟ್ರಿಬ್ಯೂಟರ್ ‘ಮೆಸರ್ಸ್ ದಿವ್ಯ ಮಹಾವಿತರಕ್’ ಸಂಸ್ಥೆ ಮೇಲೆ FDA ಅಧಿಕಾರಿಗಳ ದಾಳಿ ಕಲಬೆರಕೆ ಮಿಸ್ ಬ್ರಾಂಡಿಂಗ್ ಹಿನ್ನೆಲೆ 4,032 ಬಾಕ್ಸ್ ತುಪ್ಪ ಸೀಜ್ ಮಾಡಿದೆ. 20.20ಲಕ್ಷ ಮೌಲ್ಯದ 2,279.7 ಲೀಟರ್ ಪತಂಜಲಿ ಹಸುವಿನ ತುಪ್ಪ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದಾದ್ಯಂತ ಒಟ್ಟು 114 ಪ್ರತಿಷ್ಠಿತ ಆಹಾರ ಸಂಸ್ಥೆಗಳು ಹಾಗು ಗೋದಾಮುಗಳ ಮೇಲೆ FDA ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿವೆ.
ಗಂಭೀರ ನೈರ್ಮಲ್ಯ ಉಲ್ಲಂಘನೆ ಮತ್ತು ಕಲಬೆರಕೆ ಹಿನ್ನೆಲೆ ಮಹಾರಾಷ್ಟ್ರದಲ್ಲಿ 19 ಆಹಾರ ಘಟಕಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ 13 FIR ದಾಖಲಿಸಿ 16 ಜನರನ್ನು ಬಂಧಿಸಲಾಗಿದೆ. ತುಪ್ಪದ ಜೊತೆಗೆ ಖಾದ್ಯ ತೈಲ, ನಮಕಿನ್, ಸಿಹಿ ತಿಂಡಿಗಳು ಮತ್ತು ಮಸಾಲೆ ಪದಾರ್ಥ ಜಪ್ತಿ ಮಾಡಲಾಗಿದೆ. ಪತಂಜಲಿ ತುಪ್ಪದ ಮಾದರಿಗಳನ್ನು ಹೆಚ್ಚಿನ ತಪಾಸಣೆಗೆ ಲ್ಯಾಬ್ ಗೆ ರವಾನಿಸಲಾಗಿದೆ.ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳುವುದಾಗಿ FDA ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ಆಹಾರ & ಔಷಧ ಆಡಳಿತ ಇಲಾಖೆ ಆಯುಕ್ತ ತುಕಾರಾಂ ಮುಂಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.















