ಪ್ರಸ್ತುತ ಹಬ್ಬಗಳ ಋತುವಿನಲ್ಲಿ ಆನ್‌ಲೈನ್ ಶಾಪಿಂಗ್ ಭರದಿಂದ ಸಾಗಿದ್ದು, ಮಾರುಕಟ್ಟೆಗೆ ತೆರಳುವ ಶ್ರಮವಿಲ್ಲದೆ ವೈವಿಧ್ಯಮಯ ಉತ್ಪನ್ನಗಳು ಲಭ್ಯವಾಗುತ್ತಿರುವುದರಿಂದ ಸಾರ್ವಜನಿಕರು ಆನ್‌ಲೈನ್ ಖರೀದಿ ಮೊರೆಹೋಗುತ್ತಿದ್ದಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ಗ್ರಾಹಕರ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ಕದ್ದು ಆರ್ಥಿಕ ವಂಚನೆ ಎಸಗಲು ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ರಿಯಾಯಿತಿಗಳು, ವಿಶೇಷ ಆಫರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಪ್ರಚಾರದ ಸಂದೇಶಗಳ ಹೆಸರಿನಲ್ಲಿ ಗ್ರಾಹಕರಿಗೆ ಸೈಬರ್ ಜಾಲ ಬೀಸಲಾಗುತ್ತಿದೆ.
ವಿಶೇಷವಾಗಿ, ಯುಪಿಐ (UPI) ಕ್ಯೂಆರ್ (QR) ಕೋಡ್‌ಗಳನ್ನು ಬಳಸಿಕೊಂಡು ವಂಚಿಸುವುದು ಹೆಚ್ಚಾಗುತ್ತಿದ್ದು, ಕ್ಯಾಶ್‌ಬ್ಯಾಕ್ ಅಥವಾ ಹಣವನ್ನು ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಪಿನ್ (PIN) ನಮೂದಿಸುವಂತೆ ನಂಬಿಸಲಾಗುತ್ತಿದೆ. ಕ್ಯೂಆರ್ ಕೋಡ್‌ಗಳನ್ನು ಕೇವಲ ಹಣ ಪಾವತಿಸಲು ಮಾತ್ರ ಬಳಸಲಾಗುತ್ತದೆ, ಹಣ ಪಡೆಯಲಲ್ಲ ಎಂಬುದನ್ನು ಸಾರ್ವಜನಿಕರು ನೆನಪಿನಲ್ಲಿಡಬೇಕಿದೆ. ಅಲ್ಲದೆ, ನಕಲಿ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣದ ನಕಲಿ ಖಾತೆಗಳು ಹಾಗೂ ಖ್ಯಾತ ಬ್ರಾಂಡ್‌ಗಳ ಹೆಸರಿನಲ್ಲಿ ಕ್ಲೋನ್ ಮಾಡಲಾದ ಆ್ಯಪ್‌ಗಳನ್ನು ಬಳಸಿ ಗ್ರಾಹಕರಿಗೆ “ಸೀಮಿತ ಅವಧಿಯ ಕೊಡುಗೆ”ಗಳ ತುರ್ತು ಒತ್ತಡ ಹೇರಿ ಹಣ ದೋಚಲಾಗುತ್ತಿದೆ. ಕೃತಕ ಬುದ್ಧಿಮತ್ತೆಯ (AI) ತಂತ್ರಜ್ಞಾನವನ್ನು ಬಳಸಿ ವಂಚಕರು ಅಸಲಿ ವೆಬ್‌ಸೈಟ್‌ಗಳಂತೆಯೇ ಕಾಣುವ ನಕಲಿ ವಿನ್ಯಾಸಗಳು ಮತ್ತು ಲೋಗೋಗಳನ್ನು ಸೃಷ್ಟಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು ಅಥವಾ ಎಸ್‌ಎಮ್‌ಎಸ್, ಈಮೇಲ್ ಹಾಗೂ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದೆ, ವೆಬ್‌ಸೈಟ್‌ಗಳ ಅಸಲಿಯತ್ತನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. ಯಾವುದೇ ಗ್ರಾಹಕ ಸೇವಾ ವಿವರಗಳಿಗಾಗಿ ಇಂಟರ್ನೆಟ್‌ನಲ್ಲಿ ಸಿಗುವ ಅಪರಿಚಿತ ಸಂಖ್ಯೆಗಳನ್ನು ನಂಬದೆ ಅಧಿಕೃತ ವೆಬ್‌ಸೈಟ್‌ಗಳನ್ನೇ ಆಶ್ರಯಿಸಬೇಕು. ಗ್ರಾಹಕರು ಜಾಗರೂಕರಾಗಿರುವುದರ ಜೊತೆಗೆ ಬ್ಯಾಂಕುಗಳು, ಸೈಬರ್ ಅಪರಾಧ ತಡೆಯುವ ಘಟಕಗಳು ಹಾಗೂ ಇ-ಕಾಮರ್ಸ್ ವೆಬ್‌ಸೈಟ್‌ಗಳು ಇಂತಹ ಅನುಮಾನಾಸ್ಪದ ವಹಿವಾಟುಗಳನ್ನು ಆರಂಭದಲ್ಲೇ ಗುರುತಿಸಿ ತಡೆಯುವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ















