ಮೂಡುಬಿದಿರೆ: ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಅಡ್ಡವಿಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿದ ವ್ಯಕ್ತಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪುಚ್ಚಮೊಗರು ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು (35) ಬಂಧಿತ ಆರೋಪಿ. ನವೆಂಬರ್ 2ರಂದು ಸಂಜೆ ಸುಮಾರು 6.30ರ ವೇಳೆಗೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜಿನ ಮಾರಿಗುಡಿ ಸಮೀಪ ಈ ಘಟನೆ ನಡೆದಿದೆ.
ರಸ್ತೆಯಲ್ಲಿ ಹೊಂಡ-ಗುಂಡಿಗಳು ಹೆಚ್ಚಾಗಿದ್ದು, ಅವುಗಳನ್ನು ತಕ್ಷಣ ಮುಚ್ಚಿ ಡಾಂಬರೀಕರಣ ಮಾಡಬೇಕೆಂದು ಪ್ರಶಾಂತ್ ಆಗ್ರಹಿಸಿದ್ದಾನೆ. ಈ ಕುರಿತು ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿ ತನ್ನ ಬೈಕ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ವಾಹನಗಳ ಸಂಚಾರವನ್ನು ತಡೆದಿದ್ದಾನೆ ಎನ್ನಲಾಗಿದೆ.
ರಸ್ತೆಯ ಗುಂಡಿಗಳನ್ನು ಮುಚ್ಚುವವರೆಗೆ ಯಾವುದೇ ವಾಹನ ಅಥವಾ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಸ್ಥಳದಲ್ಲಿ ಗಲಾಟೆ ನಡೆಸಿದ್ದಾನೆ. ಸಂಚಾರ ಸುಗಮಗೊಳಿಸಲು ಬಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ವಿರುದ್ಧ ದುರ್ವರ್ತನೆ ತೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದ ಮೂಡುಬಿದಿರೆಯಿಂದ ಬೆಳ್ತಂಗಡಿ ಕಡೆಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಒಂದು ಕಿಲೋಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 153/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 126(2), 352 ಮತ್ತು 351(2)ರಂತೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ಆರೋಪಿ ಪ್ರಶಾಂತ್ ಅಲಿಯಾಸ್ ಪಚ್ಚುನನ್ನು ಪೊಲೀಸರು ಬಂಧಿಸಿದ್ದಾರೆ.















