ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಭೀಕರ ಘಟನೆಯೊಂದು ನಡೆದಿದೆ. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾಗಲೇ ಏಕಾಏಕಿ ಕತ್ತರಿಸುವ ಯಂತ್ರ (ಚೈನ್ಸಾ) ಹಿಡಿದು ಒಳನುಗ್ಗಿದ 21 ವರ್ಷದ ಯುವಕನೊಬ್ಬ, 10 ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಈ ದೈತ್ಯಾಕಾರದ ದಾಳಿಯಿಂದಾಗಿ ಇಬ್ಬರು ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದು, ಶಾಲಾ ಆವರಣದಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.
ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಸುಮಾರು 10.30 ರ ವೇಳೆಗೆ ಈ ಭೀಕರ ಕೃತ್ಯ ನಡೆದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗಲೇ ಯುವಕ ಮೆಷಿನ್ ಸಮೇತ ಸಾಗರೋಪಾದಿಯಲ್ಲಿ ಒಳನುಗ್ಗಿದ್ದಾನೆ. ಸದ್ಯ ಗಾಯಗೊಂಡ ಇಬ್ಬರೂ ವಿದ್ಯಾರ್ಥಿನಿಯರನ್ನು ತಕ್ಷಣವೇ ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಾಯಾಳು ವಿದ್ಯಾರ್ಥಿನಿಯರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ಅನಂತಪುರ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ. ಪ್ರಸ್ತುತ ಆಕೆಯನ್ನು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಪೊಲೀಸ್ ಮಾಹಿತಿಯ ಪ್ರಕಾರ, ದಾಳಿ ನಡೆಸಿದ ಆರೋಪಿಯನ್ನು ಹೇಮಂತ್ ಅಲಿಯಾಸ್ ಡುಮ್ಮು (21) ಎಂದು ಗುರುತಿಸಲಾಗಿದೆ. ಈತ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಮೂಲದವನಾಗಿದ್ದು, ಗಾಯಗೊಂಡ ವಿದ್ಯಾರ್ಥಿನಿಯ ದೂರದ ಸಂಬಂಧಿ ಎಂದು ತಿಳಿದುಬಂದಿದೆ. ದಾಳಿಯ ನಂತರ ಶಾಲೆಯಿಂದ ಕಾಲ್ಕಿತ್ತಿದ್ದ ಆರೋಪಿಯನ್ನು ಪೊಲೀಸರು ಧರ್ಮಾವರಂ ರೈಲ್ವೆ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಶಾಲೆಗೆ ನುಗ್ಗಿ ನಡೆದ ಈ ದಿಢೀರ್ ರಾಕ್ಷಸೀ ಕೃತ್ಯದಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬಳಗ ಆಘಾತಕ್ಕೊಳಗಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಯುವಕ ಶಾಲೆಗೆ ನುಗ್ಗಿ ಈ ರೀತಿ ಹಲ್ಲೆ ನಡೆಸಲು ನಿಖರ ಕಾರಣವೇನು ಎಂಬುದರ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.















