ರೌಡಿಶೀಟರ್ಗಳ ಜೊತೆ ಬಾರ್ನಲ್ಲಿ ರಾತ್ರಿ ಇಡೀ ಪಾರ್ಟಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಪೊಲೀಸ್ ಠಾಣೆಯ ಎಎಸ್ಐ ವೀರೇಂದ್ರ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಆದೇಶಿಸಿದ್ದಾರೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಒಂದು ವಾರದ ಹಿಂದೆ ಬಾರ್ನಲ್ಲಿ ಎಎಸ್ಐ ವೀರೇಂದ್ರ ಅವರು ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ. ರಾತ್ರಿ ಇಡೀ ಬಾರ್ನಲ್ಲಿ ಪಾರ್ಟಿ ನಡೆದಿದ್ದು, ಜೋರಾಗಿ ಹಾಡು ಹಾಕಿದ್ದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿತ್ತು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾರ್ ಮುಂಭಾಗದಲ್ಲಿ ರಾತ್ರೋರಾತ್ರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ, ಬಾರ್ ಬಂದ್ ಮಾಡುವಂತೆ ಒತ್ತಾಯಿಸಿದ್ದರು.
ಪೊಲೀಸ್ ಅಧಿಕಾರಿಯೊಬ್ಬರು ರೌಡಿಶೀಟರ್ಗಳೊಂದಿಗೆ ಸೇರಿ ಪಾರ್ಟಿ ನಡೆಸಿದ್ದಾರೆ ಎಂಬ ಆರೋಪ ಹಾಗೂ ಈ ಸಂಬಂಧ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖಾ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಎಎಸ್ಐ ವೀರೇಂದ್ರ ಅವರನ್ನು ಅಮಾನತುಗೊಳಿಸಿ ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಆದೇಶ ಹೊರಡಿಸಿದ್ದಾರೆ.















