ಬೈಂದೂರು: ಯಡ್ತರೆ ಗ್ರಾಮದ ಎಸ್ಬಿಐ ಬ್ಯಾಂಕ್ ಹಿಂಭಾಗದ ಬಾಡಿಗೆ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಬೈಂದೂರು ಪೊಲೀಸರು, ರಾಜಸ್ಥಾನ ಮೂಲದ ಆರೋಪಿಯನ್ನು ಬಂಧಿಸಿ 6 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಮಹೇಂದ್ರ ಸೈನ್ (23) ಬಂಧಿತ ಆರೋಪಿ. ಈತ ಬೈಂದೂರಿನ ಬಂಕೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಏಪ್ರಿಲ್ 23 ರಂದು ಮಧ್ಯಾಹ್ನ ಯಡ್ತರೆ ನಿವಾಸಿ ರಾವಲ್ ಸಿಂಗ್ ಎಂಬುವವರು ಮನೆಯಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿದ್ದ ಆರೋಪಿ, ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದನು. ಗೋದ್ರೇಜ್ ಅಲ್ಮೆರಾದಲ್ಲಿದ್ದ 6 ಲಕ್ಷ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದನು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ನಿರ್ದೇಶನದಂತೆ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ವಿಧಾನ ಮತ್ತು ಸ್ಥಳೀಯ ಬಾತ್ಮೀದಾರರ ಖಚಿತ ಮಾಹಿತಿ ಆಧರಿಸಿ ಮೇ 7 ರಂದು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಪೂರ್ಣ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಸುನೀಲ್ ಕುಮಾರ್, ನವೀನ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು
