ಹಸಿರು ವಲಯದಲ್ಲಿದ್ದಂತ ಭೂಮಿಯನ್ನು ವಾಣಿಜ್ಯ ವಲಯವಾಗಿ ಬದಲಾವಣೆ ಮಾಡೋದಕ್ಕೆ ಅದರಲ್ಲಿ ಇರೋದು ಏನು ಅನ್ನೋದನ್ನು ಸಂಬಂಧ ಪಟ್ಟಂತ ಸ್ಥಳೀಯ ಆಡಳಿತ, ತಾಲ್ಲೂಕು ಹಾಗೂ ಜಿಲ್ಲಾ ಆಡಳಿತ ಗಮನಿಸಿ ಅನುಮತಿ ನೀಡಬೇಕು. ಆದರೇ ಕಾಡಂತಿದ್ದ ಖಾಸಗಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಭೂ ಪರಿವರ್ತನೆ ವೇಳೆಯಲ್ಲಿ ಅದನ್ನೇ ಮರೆತ ಅಧಿಕಾರಿಗಳು ಮಾತ್ರ ಅನುಮತಿಸಿದ್ದರ ಪರಿಣಾಮ ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ಲೇಔಟ್ ಹೆಸರಲ್ಲಿ ಮರಗಳ ಮಾರಣಹೋಮವೇ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗದಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎದುರಲ್ಲಿನ ಸರ್ವೆ ನಂಬರ್ 84, 85ರಲ್ಲೇ ಲೇಔಟ್ ಹೆಸರಿನಲ್ಲಿ ಮರಗಳ ಮಾರಣಹೋಮವಾಗುತ್ತಿದೆ. ಕಾಡಿಗೆ ಹೊಂದಿಕೊಂಡಿರುವಂತ ಈ ಖಾಸಗಿ ಜಮೀನನ್ನು ಲೇಔಟ್ ಮಾಡೋದಕ್ಕೆ ಭೂ ವರಿವರ್ತನೆ ಮಾಡಲಾಗಿದೆ. ಆದರೇ ಭೂ ಪರಿವರ್ತನೆ ಮಾಡಿ ಕೊಡುವ ಮೊದಲು ಸ್ಥಳೀಯ ಪಡವಗೋಡು ಗ್ರಾಮ ಪಂಚಾಯ್ತಿಯವರು ಮಾತ್ರ ಮಾನದಂತವನ್ನೇ ಅನುಸರಿಸದೇ, ತಾಲ್ಲೂಕು, ಜಿಲ್ಲಾ ಆಡಳಿತಕ್ಕೆ ಶಿಫಾರಸ್ಸು ಮಾಡಿರೋದೇ ಕಾಡಂತಿದ್ದಂತ ಜಮೀನಿನಲ್ಲಿನ ಮರಗಳನ್ನು ಕಡಿತಲೆ ಮಾಡಿ ಬೆಂಗಾಡಾಗಿ ಮಾರ್ಪಡಿಸಲಾಗಿದೆ.
ನೂರಾರು ಮರಗಳ ಕಡಿತಲೆಗೆ ಅನುಮತಿ ಕೊಟ್ಟ ಅರಣ್ಯ ಇಲಾಖೆ
ಕಾಡಿಗೆ ಹೊಂದಿಕೊಂಡಿರುವಂತ ಲಿಂಗದಹಳ್ಳಿ ಸಮೀಪದ ಸರ್ವೆ ನಂಬರ್.84, 85ರಲ್ಲಿ ನೂರಾರು ಕಾಡು ಜಾತಿಯ ಮರಗಳಿದ್ದವು. ಇಷ್ಟು ಪ್ರಮಾಣದಲ್ಲಿ ಮರಗಳಿದ್ದರೂ ಅವುಗಳನ್ನು ರಕ್ಷಿಸಿ, ಕಡಿತಲೆ ಮಾಡೋದಕ್ಕೆ ಅನುಮತಿ ನೀಡಲು ನಿರಾಕರಿಸಬೇಕಿದ್ದಂತ ಅರಣ್ಯ ಇಲಾಖೆ ಮಾತ್ರ, ಆ ಕೆಲಸವನ್ನೇ ಮಾಡಿಲ್ಲ ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸರ್ವೆ ನಂಬರ್.84, 85ರಲ್ಲಿ ಇದ್ದಂತ ನೂರಾರು ಮರಗಳನ್ನು ಕಡಿತಲೆ ಮಾಡೋದಕ್ಕೆ ಖಾಸಗಿ ಜಮೀನು ಮಾಲೀಕ ಲೇಔಟ್ ಆಗಿ ಪರಿವರ್ತಿಸಿದ ನಂತ್ರ ಅನುಮತಿಗಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ರೇ, ಕನಿಷ್ಠ ಅಬ್ಜೆಕ್ಷನ್ ಕೂಡ ಮಾಡದೇ ಅನುಮತಿ ನೀಡಿದ್ದು ಮಾತ್ರ ದುರಂತವೇ ಸರಿ. ಈ ಜಾಗದಲ್ಲಿದ್ದಂತ ಬರೋಬ್ಬರಿ 80 ರಿಂದ 90 ಕಾಡು ಜಾತಿಯ ಮರಗಳನ್ನ ಕಡಿತಲೆ ಮಾಡೋದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಆ ಮೂಲಕ ಮರಗಳ ರಕ್ಷಣೆಗೆ ನಿಲ್ಲಬೇಕಿದ್ದಂತ ಅರಣ್ಯಾಧಿಕಾರಿಗಳೇ, ಸರ್ವ ನಾಶ ಮಾಡಿದ್ದು ಮಾತ್ರ ಖೇದಕರ ಸಂಗತಿಯಾಗಿದೆ.
ನೂರಾರು ಮರಗಳ ನಡುವೆ ಟ್ರಂಚ್, ಒಣಗುವ ಸ್ಥಿತಿಯಲ್ಲಿ ಮರಗಳು
ಇನ್ನೂ ಸರ್ವೆ ನಂಬರ್ 84, 85ರಲ್ಲಿ ಲೇಔಟ್ ನಿರ್ಮಾಣ ಮಾಡುತ್ತಿದ್ದರೇ, ತಮ್ಮ ಜಾಗದ ಹದ್ದು ಬಸ್ತಿಗಾಗಿ ನೂರಾರು ಮರಗಳ ನಡುವೆಯೇ ಟ್ರಂಚ್ ಹೊಡೆಯಲಾಗಿದೆ. ಇದರಿಂದಾಗಿ ಟ್ರಂಚ್ ಹೊಡೆದಂತ ಜಾಗದಲ್ಲಿನ ಮರಗಳ ಬೇರುಗಳು ಸಡಿಲಗೊಂಡಿದ್ದು, ಒಣಗುತ್ತಿರೋದನ್ನು ಕಾಣಬಹುದಾಗಿದೆ. ಈಗಾಗಲೇ ಹತ್ತಾರು ಮರಗಳು ಒಣಗಿದ್ದರೇ, ಇನ್ನೂ ಕೆಲವು ಒಣಗುವ ಹಂತವನ್ನು ತಲುಪಿರುವುದು ಮಾತ್ರ ಪರಿಸರ ಪ್ರೇಮಿಗಳ ಕಣ್ಣಿಗೆ ಕಾಣದಿರುವುದೇ ವಿಪರ್ಯಾಸ.
ಇಂದು ಕೂಡ ಹತ್ತಾರು ಮರ ಕಡಿತಲೆ
ಲಿಂಗದಹಳ್ಳಿ ಸಮೀಪದ ಸರ್ವೆ ನಂಬರ್.84, 85ರಲ್ಲಿ ಈ ಹಿಂದೆ 80 ರಿಂದ 90 ಮರಗಳನ್ನು ಲೇಔಟ್ ಮಾಲೀಕರು ಕಡಿತಲೆ ಮಾಡಿದ್ದರು. ಅದರಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದು ಎಷ್ಟೇ, ಅಲ್ಲಿ ಕಡಿತಲೇ ಮಾಡಿದ್ದೆಷ್ಟೇ ಎಂಬುದು ಹಲವರ ಅನುಮಾನವಾಗಿದೆ. ಇದರ ನಡುವೆ, ಇಂದು ಕೂಡ ಹತ್ತಾರು ಮರಗಳನ್ನು ಕಡಿತಲೆ ಮಾಡಲಾಗಿದೆ. ಇಂದು ಕಾಡಿಗೆ ಹೊಂದಿಕೊಂಡಂತೆ ಇದ್ದಂತ ಕಾಡು ಜಾತಿಯ ಮರಗಳನ್ನು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೇ ಕಡಿತಲೆ ಮಾಡಲಾಗಿದೆ.
ನೀವು ಮರ ಕಡೀರಿ, ನಾವು ದಂಡ ಹಾಕ್ತಿ ಅನ್ನೋದಷ್ಟೇ ಅರಣ್ಯ ಇಲಾಖೆಯ ಕೆಲಸನಾ?
ಸಾಗರ ತಾಲ್ಲೂಕಿನಲ್ಲಿ ಅರಣ್ಯ ನಾಶವು ಅರಣ್ಯಾಧಿಕಾರಿಗಳ ಮೃದು ಧೋರಣೆಯಿಂದ ದಿನೇ ದಿನೇ ಹೆಚ್ಚಾಗುತ್ತಿದೆ. ತಾಲ್ಲೂಕಿನ ವಿವಿಧೆಡೆಯಲ್ಲಿ ಅಕ್ರಮವಾಗಿ ಮರ ಕಡಿತಲೇ ನಿರಂತರವಾಗಿ ಆಗುತ್ತಿದ್ದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕೇವಲ ನೀವು ಮರ ಕಡೀರಿ, ನಾವು ದಂಡ ಹಾಕ್ತೀವಿ ಎನ್ನುವ ಕೆಲಸವನ್ನು ಮಾತ್ರವೇ ಮಾಡುತ್ತಿದ್ದಾರೆ. ಹಾಗಾದ್ರೆ ಮರ ಕಡಿಯೋ ಮೊದಲು ಅವುಗಳನ್ನು ತಡೆಯೋ ಕೆಲಸ ಏಕೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇದೀಗ ಲಿಂಗದಹಳ್ಳಿಯ ಸರ್ವೆ ನಂಬರ್.84, 85ರ ಲೇಔಟ್ ನಿರ್ಮಾಣ ಕಾಮಗಾರಿಯ ವೇಳೆಯಲ್ಲಿ ಇಂದು ಅಕ್ರಮವಾಗಿ ಹತ್ತಾರು ಮರಗಳನ್ನು ಕತ್ತರಿಸಿ ಹಾಕಲಾಗಿದೆ. ಕಡಿತಲೆ ಮಾಡಿದಂತ ಮರಗಳನ್ನು ಜಪ್ತಿ ಮಾಡಿ, ಮರಗಳನ್ನು ಆಧರಿಸಿ ಬರೀ ದಂಡವನ್ನು ಹಾಕಿ ಕೈ ಬಿಡುವಂತ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಇದಷ್ಟೇ ಮಾಡುವುದಾದರೇ ಕಾಡನ್ನು ರಕ್ಷಣೆ ಮಾಡೋರು ಯಾರು ಸ್ವಾಮಿ? ದಂಡಾಸ್ತ್ರವನ್ನಷ್ಟೇ ಅಲ್ಲದೇ ಅಕ್ರಮವಾಗಿ ಮರ ಕಡಿದವರ ವಿರುದ್ಧ ಕಾನೂನಿನ ಅಸ್ತ್ರವನ್ನು ಪ್ರಯೋಗಿಸಿ, ಮುಂದೆ ಯಾರೂ ಹೀಗೆ ಮಾಡದಂತೆ ಎಚ್ಚರಿಕೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆ ಕೆಲಸವನ್ನು ಸಾಗರದ ಅರಣ್ಯಾಧಿಕಾರಿಗಳು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
