ಮೂಡಬಿದ್ರೆ: ಪತಿಯನ್ನು ಬಿಡುಗಡೆ ಮಾಡಿಸಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಪೊಲೀಸ್ ಇನ್ಸ್ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತ ಮಹಿಳೆ ಈ ಆರೋಪ ಮಾಡಿದ್ದಾರೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಮಹಿಳೆ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಸಂದೇಶ್ ಅಸಭ್ಯವಾಗಿ ವರ್ತಿಸಿ, ಪತಿಯನ್ನು ಬಿಡಿಸಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಒತ್ತಾಯಿಸಿದರು ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ಅಷ್ಟೇ ಅಲ್ಲದೆ, ಮಹಿಳೆ ನೀಡಿರುವ ದೂರಿನ ಪ್ರಕಾರ, ಇನ್ಸ್ಪೆಕ್ಟರ್ ಹಣದ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. “ಲೈಂಗಿಕವಾಗಿ ಸಹಕರಿಸಲು ಆಗದಿದ್ದರೆ 25 ಲಕ್ಷ ರೂಪಾಯಿ ಕೊಡಬೇಕು. ಇಲ್ಲವಾದರೆ ನಿನ್ನ ಪತಿಯ ಮೇಲೆ ರೌಡಿಶೀಟ್ ತೆರೆಯುತ್ತೇನೆ” ಎಂದು ಬೆದರಿಕೆ ಹಾಕಿದರೆಂದು ಮಹಿಳೆ ಹೇಳಿದ್ದಾರೆ. ಇನ್ಸ್ಪೆಕ್ಟರ್ ಇನ್ನಷ್ಟು ಅಸಭ್ಯ ಮಾತುಗಳನ್ನು ಬಳಸಿ, “ಈ ಪೋಸ್ಟ್ಗೆ ಬರಲು ನಾನು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಹೀಗಾಗಿ ನನ್ನ ಮಾತು ಕೇಳಬೇಕು” ಎಂದು ಹೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಇನ್ಸ್ಪೆಕ್ಟರ್ ಹಲವಾರು ಮಹಿಳೆಯರೊಂದಿಗೆ ಇದೇ ರೀತಿಯ ವರ್ತನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. “ನನ್ನ ಬಳಿ ನೂರಾರು ಮಹಿಳೆಯರು ಇದ್ದಾರೆ. ಅವರಂತೆ ನೀನು ಸಹ ಸಹಕರಿಸಬೇಕು. ಇಲ್ಲವಾದರೆ ಡ್ರಗ್ಸ್ ಪೆಡ್ಲರ್ಗಳಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯಿಸುತ್ತೇನೆ” ಎಂದು ಇನ್ಸ್ಪೆಕ್ಟರ್ ಬೆದರಿಕೆ ಹಾಕಿದರೆಂದು ಮಹಿಳೆ ದೂರಿದ್ದಾರೆ.
ಇನ್ಸ್ಪೆಕ್ಟರ್ ತನ್ನ ಮನೆಯಲ್ಲಿಯೂ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ರಾತ್ರಿ ವೇಳೆ ಮನೆ ಗೇಟ್ ಹಾರಿ ಒಳಗೆ ನುಗ್ಗಿ ಕಿರುಕುಳ ನೀಡಿದ ಘಟನೆಗಳೂ ನಡೆದಿವೆ ಎಂದು ಮಹಿಳೆ ಆರೋಪಿಸಿದ್ದಾರೆ. ಒಪ್ಪದಿದ್ದರೆ ತನ್ನ ಪತಿ ಅಥವಾ ಸಂಬಂಧಿಕರನ್ನು ಬಂಧಿಸಿ ಕಿರುಕುಳ ನೀಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರೆಂದು ಮಹಿಳೆ ತಿಳಿಸಿದ್ದಾರೆ. ಮಹಿಳೆಯ ಮಗಳ ಮೇಲೂ ಇನ್ಸ್ಪೆಕ್ಟರ್ ಕಣ್ಣು ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. “ನಿನ್ನ ಮಗಳನ್ನು ನನ್ನ ಬಳಿಗೆ ಕಳುಹಿಸು” ಎಂದು ಅಸಭ್ಯವಾಗಿ ಮಾತನಾಡಿದರೆಂದು ಮಹಿಳೆ ದೂರಿದ್ದಾರೆ. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಮಹಿಳೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
